ಪೆರ್ಲ: ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ದೀವಟಿಗೆ ಬೀದಿ ನಾಟಕ ಪ್ರದರ್ಶನ

Share with

ಪೆರ್ಲ: ಹೆಣ್ಣು ಮಕ್ಕಳು ಜನಿಸಿದಾಗ ನಾವು ಖುಷಿಯಿಂದ ಸಂಭ್ರಮಿಸಬೇಕು.ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ಪುತ್ರಿಯ ಬಗ್ಗೆ ಹೆಮ್ಮೆ‌ಪಡಬೇಕು ಎಂದು ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಹೇಳಿದರು.

"ಚೂಟ್" (ದೀವಟಿಕೆ) ಮಲಯಾಳಂ‌ ಬೀದಿ ನಾಟಕ‌.

ಕೇಂದ್ರ ಸರಕಾರದ ಬೇಟಿ ಬಚಾವೋ, ಬೇಟಿ ಪಢಾವೋ (ಮಗಳನ್ನು ಉಳಿಸಿ, ಮಗಳಿಗೆ ಶಿಕ್ಷಣ ನೀಡಿ) ಅಭಿಯಾನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ‌ ಕಾಸರಗೋಡು ನಿರ್ದೇಶನದಂತೆ ಐಸಿಡಿಎಸ್ ಮಂಜೇಶ್ವರ ಎಡಿಶನಲ್ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ಅಡಿ ವಿವಿಧ ಶಾಲೆಗಳಲ್ಲಿ ಸೈಕೋ ಸಾಮಾಜಿಕ ಶಾಲಾ ಕೌನ್ಸಿಲರ್‌ ಅಭಿನೇತ್ರಿಗಳ ಭಾಗವಹಿಸುವಿಕೆಯ ಮೂಲಕ ಪೆರ್ಲ ಪೇಟೆಯಲ್ಲಿ ನಡೆದ “ಚೂಟ್” (ದೀವಟಿಕೆ) ಮಲಯಾಳಂ‌ ಬೀದಿ ನಾಟಕ‌ ಉದ್ಘಾಟಿಸಿ ಮಾತನಾಡಿದರು.

"ಚೂಟ್" ಮಲಯಾಳಂ‌ ಬೀದಿ ನಾಟಕ‌ ಉದ್ಘಾಟಿಸಿ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿದರು.

ಪಿಸಿ ಮತ್ತು ಪಿಎನ್ ಡಿಟಿ ಕಾಯಿದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ. ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾನ್ ಹಂಸಾರ್ ಮಾತನಾಡಿ, ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶದಿಂದ ದೇಶವ್ಯಾಪಿ ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನ ಆಯೋಜಿಸಲಾಗುತ್ತಿದೆ. ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮೂಲ ಮಂತ್ರವಾಗಿರಬೇಕು. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ, ತರಬೇತುದಾರರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಾಗೃತಿ ಅಭಿಯಾನಗಳಿಂದ ಲಿಂಗ ಆಧರಿತ ಗರ್ಭಪಾತಗಳ ಪರಿಣಾಮದ ಕುರಿತು ಜನರಲ್ಲಿ ಅರಿವು ಮೂಡತೊಡಗಿದೆ ಎಂದರು.

ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಕೌನ್ಸೆಲರ್ ಕೀರ್ತಿ ಬಿ.ಕೆ. ಜಾಗೃತಿ ತರಗತಿ ನೀಡಿ ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹೆಣ್ಣು ಮಗುವಿನ ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗಂಡು ಹೆಣ್ಣೆಂಬ ಬೇಧ ಭಾವ ತೋರದೆ ಗಂಡು ಮಕ್ಕಳಿಗೆ ಕೊಡುವ ಎಲ್ಲಾ ಆದ್ಯತೆ ಸವಲತ್ತು, ಶಿಕ್ಷಣವನ್ನು ಹೆಣ್ಣು ಮಕ್ಕಳಿಗೂ ಒದಗಿಸಬೇಕು‌. ಹೆಣ್ಣುಮಕ್ಕಳೂ ಉದ್ಯೋಗ ಪಡೆದು ಪರರನ್ನು ಆಶ್ರಯಿಸದೆ ಸ್ವಂತ ಕಾಲಿನಲ್ಲಿ ನಿಲ್ಲುವಂತಾಗಬೇಕು ಎಂದರು.

ಎಣ್ಮಕಜೆ ಗ್ರಾಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ವಾರ್ಡ್ ಸದಸ್ಯೆ ಉಷಾ ಗಣೇಶ್, ಮಂಜೇಶ್ವರ ಎಡಿಶನಲ್ ಐಸಿಡಿಎಸ್ ಕೌನ್ಸೆಲರ್ ಸುಶ್ಮಾ ಸಿ.ಎಚ್., ಗೀತಾ ಮರಕ್ಕಿಣಿ ಉಪಸ್ಥಿತರಿದ್ದರು. ಮಂಜೇಶ್ವರ ಐಸಿಡಿ ಎಸ್ ಸೂಪರ್ ವೈಸರ್ ಪ್ರೇಮಲತ ಸ್ವಾಗತಿಸಿದರು. ವಾರ್ಡ್ ಸದಸ್ಯೆ ಕುಸುಮಾವತಿ ವಂದಿಸಿದರು.

ನಿರ್ಣಾಯಕವಾದ ಔಪಚಾರಿಕ ಶಿಕ್ಷಣದ ಅವಧಿಯಲ್ಲಿ ಮಕ್ಕಳು ಎದುರಿಸುತ್ತಿರುವ ಹಲವಾರು ಸವಾಲುಗಳಲ್ಲಿ ಕೌನ್ಸಿಲಿಂಗ್ ಮತ್ತು ಬೋಧನೆ ತರಗತಿಗಳು ನಡೆಸಿದ ಅನುಭವವಿರುವ ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ಅಡಿ ವಿವಿಧ ಶಾಲೆಗಳಲ್ಲಿ ಸೈಕೋ ಸಾಮಾಜಿಕ ಶಾಲಾ ಕೌನ್ಸಿಲರ್‌ ಗಳು ನಾಟಕದಲ್ಲಿ ಉತ್ತಮವಾಗಿ ಅಭಿನಯಿಸಿದರು. ಪೆರ್ಲ ಸತ್ಯನಾರಾಯಣ, ಪ್ರೌಢಶಾಲೆ ವಿದ್ಯಾರ್ಥಿಗಳು, ಸಾರ್ವಜನಿಕರು ಬೀದಿ ನಾಟಕದ ಸವಿಯುಂಡರು.


Share with

Leave a Reply

Your email address will not be published. Required fields are marked *