ಬೆಳ್ತಂಗಡಿ: ಡಿ.8ರಿಂದ 12ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ

Share with

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿ.8ರಿಂದ 12ರವರೆಗೆ ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಡಿ.8ರಿಂದ 12ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ.

ಡಿಸೆಂಬರ್ 11ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ವಿದ್ವಾಂಸ ಗುರುರಾಜ ಕರಜಗಿ ಅವರು ಉದ್ಘಾಟಿಸಲಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರಾದ ಎಂ.ಆರ್.ವೆಂಕಟೇಶ್ ಮತ್ತು ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ ಅವರು ಧಾರ್ಮಿಕ ಉಪನ್ಯಾಸವನ್ನು ನೀಡುವರು. ರಾತ್ರಿ 8.30ರಿಂದ ಬೆಂಗಳೂರಿನ ಅನುರಾಧಾ ವಿಕ್ರಾಂತ್ ಬಳಗದವರಿಂದ ನೃತ್ಯ ಪ್ರದರ್ಶನವಿರಲಿದೆ.

ಡಿಸೆಂಬರ್ 12ರಂದು ಸಂಜೆ 5ಗಂಟೆಗೆ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಬೆಂಗಳೂರಿನ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ಉದ್ಘಾಟಿಸುವರು. ಬೆಂಗಳೂರಿನ ಗಮಕಿ ಎ.ವಿ ಪ್ರಸನ್ನ ಅವರು ಅಧ್ಯಕ್ಷತೆಯನ್ನು ವಹಿಸುವರು. ಹೊನ್ನಾವರದ ನಿವೃತ್ತ ಉಪನ್ಯಾಸಕ ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಾಡಿ, ಬಂಟ್ವಾಳದ ಅಜಕ್ಕಳ ಗಿರೀಶ್ ಭಟ್ ಉಪನ್ಯಾಸವನ್ನು ನೀಡಲಿರುವರು.

ರಾತ್ರಿ 8.30ರಿಂದ ಬೆಂಗಳೂರಿನ ಜತಿನ್ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣ್ಯೇಶ್ ಹಾಗೂ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ. ಡಿಸೆಂಬರ್ 8ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಧರ್ಮಸ್ಥಳ ಪ್ರೌಢಶಾಲೆಯ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್‌ ನಂದನ್ ಅವರು ಉದ್ಘಾಟಿಸುವರು. ವಸ್ತು ಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.10ರಂದು ಸಂಜೆ 7ರಿಂದ 10ರ ತನಕ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ. ಡಿ.12ರಂದು ರಾತ್ರಿ 12 ಗಂಟೆಯ ಬಳಿಕ ಲಕ್ಷದೀಪೋತ್ಸವವು ನಡೆಯಲಿದೆ.

ಡಿಸೆಂಬರ್ 8ರಂದು ಹೊಸಕಟ್ಟೆ ಉತ್ಸವ, 9ರಂದು ಕೆರೆಕಟ್ಟೆ ಉತ್ಸವ, 10ರಂದು ಲಲಿತೋದ್ಯಾನ ಉತ್ಸವ, 11ರಂದು ಕಂಚಿಮಾರುಕಟ್ಟೆ ಉತ್ಸವ, 12ರಂದು ಗೌರಿಮಾರುಕಟ್ಟೆ ಉತ್ಸವ, ಲಕ್ಷದೀಪೋತ್ಸವ, 13ರಂದು ಸಂಜೆ 7ರಿಂದ ಭಗವಾನ್ ಶ್ರೀಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಸಮವಸರಣ ಪೂಜೆ ನಡೆಯಲಿದೆ.


Share with

Leave a Reply

Your email address will not be published. Required fields are marked *