ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನದ ಬಿಡುಗಡೆಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಅರಣ್ಯ ಇಲಾಖೆಯ ನೌಕರರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯ ಕ್ಷೇಮಾಭಿವೃದ್ಧಿ ನೌಕರರಾದ ಬಿ ಮಂಜುನಾಥ್ ಪೂಜಾರಿ ಬಂಧಿತ ಆರೋಪಿಯಾಗಿದ್ದು, ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬುವವರ ವಾಹನದ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ ಅವರು 15 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದರು.
ಲಂಚ ನೀಡಲು ಒಪ್ಪದ ಆದಿತ್ಯ ಅವರು ಇದರ ಕುರಿತು ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರನ್ನು ನೀಡಿದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಮಂಜುನಾಥ್ ಪೂಜಾರಿಯನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್.ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.