ಬೆಳ್ತಂಗಡಿ: 3 ದಿನಗಳ 21ನೇ ಗೋಗಟೆ ಕುಲ ಸಮ್ಮೇಳನ

Share with

ಬೆಳ್ತಂಗಡಿ: ಗೋಗಟೆ ಕುಲಮಂಡಲ ಪುಣೆ ಇವರ ಆಶ್ರಯದಲ್ಲಿ 3 ದಿನಗಳ 21ನೇ ಗೋಗಟೆ ಕುಲ ಸಮ್ಮೇಳನ ದರ್ಭೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಳದ ಕೃಷ್ಣಾನಂದ ವಿಷ್ಣು ಗೋಗಟೆ ವೇದಿಕೆಯಲ್ಲಿ ನಡೆಯಿತು. ಡಿ.2ರಂದು ಬೆಳಿಗ್ಗೆ ವೇದ ಘೋಷ, ಪ್ರಾರ್ಥನೆ ಹಾಗೂ ದ್ವೀಪ ಪ್ರಜ್ವಲನೆ ಮೂಲಕ ಸಮ್ಮೇಳನವನ್ನು ಉದ್ಘಾಟಿಸಲಾಯಿತು.

ವೇದ ಘೋಷ, ಪ್ರಾರ್ಥನೆ ಹಾಗೂ ದ್ವೀಪ ಪ್ರಜ್ವಲನೆ ಮೂಲಕ ಗೋಗಟೆ ಕುಲ ಸಮ್ಮೇಳನವನ್ನು ಉದ್ಘಾಟಿಸಲಾಯಿತು.

ಕುಲಮಂಡಲದ ಕಾರ್ಯಾಧ್ಯಕ್ಷ ಪುಣೆಯ ದೀಪಕ ಗಣೇಶ ಗೋಗಟೆ ಅವರು ಉದ್ಘಾಟಸಿ, ಮಹಾರಾಷ್ಟ್ರದಲ್ಲಿನ ಹಾಗೂ ಕರ್ನಾಟಕದಲ್ಲಿನ ಗೋಗಟೆ ಕುಲ ಬಾಂಧವರ ಪರಸ್ಪರ ಪರಿಚಯ, ವೃತ್ತಾಂತಗಳ ಅರಿವು ಈ ಸಮ್ಮೇಳನದ ಮೂಲಕ ನಡೆಯಲಿದೆ. ನಮ್ಮ ಭಾಷೆಯು ಭಿನ್ನವಾಗಿದ್ದರು ನಮ್ಮೆಲ್ಲರ ಸಂಸ್ಕೃತಿ, ಸಂಪ್ರದಾಯಗಳು ಒಂದೇ ಆಗಿವೆ. ಮುಂದಿನ ಪೀಳಿಗೆಗೆ ಇದರ ಅರಿವನ್ನು ಮೂಡಿಸುವ ಅಗತ್ಯವಿದೆ ಎಂದ ಅವರು ಕುಲಮಂಡಲದ ವತಿಯಿಂದ ದರ್ಭೆತಡ್ಕ ದೇವಸ್ಥಾನದ ಅಭಿವೃದ್ಧಿಗೆ ರೂ.ಒಂದು ಲಕ್ಷದ ನೆರವನ್ನು ನೀಡಿರುವುದನ್ನು ಸ್ಮರಿಸಿದರು.

"ಗೋಗಟೆ ವಂಶಜರ ಇತಿಹಾಸ ಪರಿಚಯ" ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಅತಿಥಿಯಾಗಿದ್ದ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಅಧ್ಯಕ್ಷ ಬೆಳ್ತಂಗಡಿಯ ತ್ರಿವಿಕ್ರಮ ಕೇಳ್ಕರ್‌ ಅವರು, ಚಿತ್ಪಾವನರು ಇಂದು ಅಲ್ಪಸಂಖ್ಯಾತರು. ಹೀಗಾಗಿ ನಾವು ಸಂಘಟಿತರಾಗಿದ್ದರೇನೇ ನಮ್ಮ ಉಳಿವು ಎಂಬುದನ್ನು ಎಚ್ಚರಿಸಿದ ಅವರು, ಗೋಗಟೆ ಕುಟುಂಬಿಕರು ದೂರದ ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ತಮ್ಮ ಪರಿಚಯ ಹಾಗೂ ನೆರವನ್ನು ನೀಡಿರುವುದು ಉತ್ತಮ ಬೆಳವಣಿಗೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಮ್ಮೇಳನ ಸಮಿತಿ ಅಧ್ಯಕ್ಷ ಹೊಸ್ಮಠ ಕರುಣಾಕರ ಗೋಗಟೆ ಅವರು ಪರಶುರಾಮನ ಕೃಪೆಯಿಂದ ನಮ್ಮ ಸಂಘಟನೆ ಬಲಗೊಳ್ಳುತ್ತಿದೆ. ಇಲ್ಲಿನ ಚಿತ್ಪಾವನ ಒಗ್ಗಟ್ಟಿನಿಂದಾಗಿ ಇಪ್ಪತ್ತೈದು ವರ್ಷಗಳ ಹಿಂದೆ ದರ್ಭೆತಡ್ಕದಲ್ಲಿ ಸೇತುವೆಯೊಂದು ನಿರ್ಮಾಣಗೊಂಡಿರುವುದನ್ನು ಸ್ಮರಿಸಿದ ಅವರು ದೇವಳದ ಅಭಿವೃದ್ಧಿಯೂ ಚಿತ್ಪಾವನರ ಸಹಕಾರದಿಂದ ನಡೆದಿದೆ ಎಂದರು. ಮಹಾರಾಷ್ಟ್ರದಿಂದ ಬಂದ ಪ್ರತಿನಿಧಿಗಳು ಮೂರು ದಿನಗಳ ಕಾಲ ನಮ್ಮೊಂದಿಗೆ ಹೊಂದಿಕೊಂಡು, ನಮ್ಮ ಆಹಾರ ಕ್ರಮಗಳನ್ನು ಅನುಸರಿಸಿ ನಮ್ಮೊಂದಿಗೆ ನಮ್ಮವರಾಗಿ ಬೆರೆತಿರುವುದು ಸಂತಸ ತಂದಿದೆ. ಕುಲಮಂಡಲದವರು ದೇವಸ್ಥಾನಕ್ಕೆ ರೂ.ಒಂದು ಲಕ್ಷ ಆರ್ಥಿಕ ಸಹಾಯ ನೀಡಿರುವುದಕ್ಕೆ ಅವರು ಕೃತಜ್ಞತೆ ಸಮರ್ಪಿಸಿದರು.

ವೇದಿಕೆಯಲ್ಲಿ ಕುಲಮಂಡಲದ ಕಾರ್ಯದರ್ಶಿ ಡೊಂಬಿವಿಲಿಯ ಶ್ರದ್ಧಾ ಉದಯ ಗೋಗಟೆ, ಪೂರ್ವಾಧ್ಯಕ್ಷೆ ಅಂಬೆಜೋಗಾಯಿಯ ಮಾಧುರಿ ವಿನಾಯಕ ಗೋಗಟೆ, ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಕಾರ್ಯದರ್ಶಿ ವರದಶಂಕರ ದಾಮಲೆ ಉಪಸ್ಥಿತರಿದ್ದರು.

ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆ “ಜಿವ್ಹಾಳಾ”ವನ್ನು ಹಾಗೂ ನಿವೃತ್ತ ಅಧ್ಯಾಪಕ ಗೋವಿಂದ ದಾಮಲೆ ಉಜಿರೆ ಅವರು ಸಂಪಾದಿಸಿದ “ಗೋಗಟೆ ವಂಶಜರ ಇತಿಹಾಸ ಪರಿಚಯ” ಎಂಬ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಸಾಂಗ್ಲಿಯ ಸಾಹಿತಿ, ಸಂಶೋಧಕ ಡಾ| ವಾಮನ ವಾಸುದೇವ ಗೋಗಟೆ, ಪನ್‌ವೇಲ್‌ನ ಕಲಾಸಾಧಕ ಪ್ರಭಾಕರ ಗೋವಿಂದ ಗೋಗಟೆ ಹಾಗೂ ಅಂಬರ್‌ನಾಥ್‌ದ ಕವಿ ಹೇಮಂತ ವಿನಾಯಕ ಗೋಗಟೆ ಅವರಿಗೆ ಗೋಗಟೆ ಕುಲಭೂಷಣ ಹಾಗೂ ತಬಲಾವಾದಕ ತಾಲಯೋಗಿ ಸಂಭಾಜಿ ನಗರ(ಔರಂಗಾಬಾದ್)ದ ದತ್ತಾತ್ರೇಯ ಮಾಣಿಕ ರಾವ್‌ ಗೋಗಟೆ ಅವರಿಗೆ ಗೋಗಟೆ ಕುಲ ಗೌರವ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.

ಮದುವೆಯಾಗಿ ಬೇರೆ ಕುಲವನ್ನು ಸೇರಿ ಮನೆ ಬೆಳಗಿದ ಗೋಗಟೆ ಕುಟುಂಬದ ಹೆಣ್ಣು ಮಕ್ಕಳನ್ನು, ಮದುವೆಯಾಗಿ ಐವತ್ತು ವರ್ಷ ಪೂರೈಸಿದವರನ್ನು, ಎಪ್ಪತ್ತೈದು ವರ್ಷ ಪೂರೈಸಿದ ಹಿರಿಯರನ್ನು ಗೌರವಿಸಲಾಯಿತು. ಮಹಾರಾಷ್ಟ್ರದ ವಿವಿಧ ಭಾಗಗಳಿಂದ 92 ಪ್ರತಿನಿಧಿಗಳ ಸಹಿತ 150 ಕ್ಕೂ ಹೆಚ್ಚು ಗೋಗಟೆ ಕುಲಬಾಂಧವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಸಮ್ಮೇಳನ ಸಮಿತಿ ಕಾರ್ಯದರ್ಶಿ ಹೃಷಿಕೇಶ ಗೋಗಟೆ ಸ್ವಾಗತಿಸಿದರು. ಸಂಯೋಜಕ ಜಾಮಸಂಡೆಯ ನಾರಾಯಣ ಶಂಕರ ಗೋಗಟೆ ಪ್ರಸ್ತಾವಿಸಿದರು. ಕಿರಣ್‌ಗೋಗಟೆ ವಂದಿಸಿದರು. ಮಾಧುರಿ ಗೋಗಟೆ ಹಾಗೂ ಅನಘಾ ಪ್ರಸಾದ ಗೋಗಟೆ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಕುಲ ಮಂಡಲದ ಮಹಾಸಭೆ ಸಂಪನ್ನಗೊಂಡಿತು. ನಂತರ ಮೈಸೂರಿನ ಪ್ರೊ.ಡಾ| ಗೋಪಾಲ ಮರಾಠೆ ಅವರು ಕರ್ನಾಟಕದಲ್ಲಿ ಚಿತ್ಪಾವನರು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಮಹಾರಾಷ್ಟ್ರ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯಲ್ಲಿ ವಿದುಷಿ ಸಂಜನಾ ಗೋಗಟೆ ಭರತ ನೃತ್ಯ ಪ್ರಸ್ತುತಪಡಿಸಿದರು.

ಡಿ.1 ರಂದು ಸದಸ್ಯರ ನೋಂದಣಿ ಪ್ರಕ್ರಿಯೆ, ಕೊಕ್ಕಡದ ನಳಿನಿ ಅವರಿಂದ ಹಾರ್ಟ್‌ಫುಲ್‌ನೆಸ್‌ ಮೆಡಿಟೇಷನ್‌ ಕಾರ್ಯಾಗಾರ, ಪ್ರತಿನಿಧಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಚಿತ್ಪಾವನ ಬಂಧುಗಳಿಂದ ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.


Share with

Leave a Reply

Your email address will not be published. Required fields are marked *