ಸೈಕ್ಲೋನ್ ಅಬ್ಬರಕ್ಕೆ ಸಿಲುಕಿದ ಚೆನ್ನೈ; ರಣಭೀಕರ ಮಳೆಗೆ ಮೃತರ ಸಂಖ್ಯೆ 8ಕ್ಕೆ ಏರಿಕೆ! ಎಲ್ಲೆಡೆ ಹೈ ಅಲರ್ಟ್‌ ಘೋಷಿಸಿದ ಸರಕಾರ

Share with

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಮೈಚಾಂಗ್ ಚಂಡಮಾರುತದ ರೌದ್ರ ನರ್ತನಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಚಂಡಮಾರುತದಿಂದಾಗಿ ಚೆನ್ನೈ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಶೇಖರಣೆಗೊಂಡು ಪ್ರವಾಹದಂತಾಗಿದ್ದು, ರಸ್ತೆಗಳು ನದಿಯಂತಾಗಿವೆ.

ಚಂಡಮಾರುತದಿಂದಾಗಿ ಚೆನ್ನೈ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ.

ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಚೆನ್ನೈ ನಗರ ಭಾಗಶಃ ಮುಳುಗಡೆಯಾಗಿದೆ. ಚೆನ್ನೈ ನಗರದ ರಸ್ತೆಗಳು ನದಿಯಂತಾಗಿ ಪ್ರವಾಹ ರೀತಿಯಲ್ಲಿ ನೀರು ಹರಿದು ಹೋಗಿದೆ. ರಸ್ತೆಗಳಲ್ಲಿ ಹರಿದ ಭಾರೀ ನೀರಿಗೆ ಕಾರುಗಳು ಕೂಡ ಕೊಚ್ಚಿ ಹೋಗಿವೆ. ಮೈಚಾಂಗ್ ಚಂಡಮಾರುತದಿಂದ ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದ ಎಂಟು ಜನ ಸಾವಿಗೀಡಾಗಿದ್ದಾರೆ.

ಚೆನ್ನೈನಲ್ಲಿ ಭಾರೀ ವೇಗವಾಗಿ ಬೀಸುತ್ತಿರುವ ಗಾಳಿ ಮತ್ತು ಗುಡುಗು ಸಹಿತ ಮಳೆಯಿಂದಾಗಿ ಓರ್ವ ಮರ ಬಿದ್ದು ಸಾವಿಗೀಡಾಗಿದ್ದಾನೆ. ಬೇರೆಡೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಅಧಿಕೃತ ಹೇಳಿಕೆ ನೀಡಿದ್ದಾರೆ. ಮಳೆ ನೀರು ಉಕ್ಕಿ ಹರಿಯುತ್ತಿರುವ ಕಾರಣ, 60 ರೈಲುಗಳು ಮತ್ತು 70 ವಿಮಾನಗಳ ಸಂಚಾರವನ್ನು ತಮಿಳುನಾಡಿನಲ್ಲಿ ಸ್ಥಗಿತಗೊಳಿಸಲಾಗಿದೆ. ಆಗಮನ ಮತ್ತು ನಿರ್ಗಮನದ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ತಮಿಳುನಾಡು ಜೊತೆಗೆ ಆಂಧ್ರಪ್ರದೇಶದಲ್ಲಿ ಕೂಡ ಮೈಚಾಂಗ್ ಚಂಡಮಾರುತ ರುದ್ರನರ್ತನ ತೋರುತ್ತಿದೆ. ಆಂಧ್ರ ಪ್ರದೇಶದಲ್ಲಿ ಸೈಕ್ಲೋನ್ ತಡೆಗೆ ಕೇಂದ್ರ ಸರ್ಕಾರ ನೆರವು ನೀಡುವುದಾಗಿ ಹೇಳಿದೆ. ಆಂಧ್ರ ಸಿಎಂ ಜೊತೆ ಪ್ರಧಾನಿ ಮೋದಿ ಕೂಡ ಮಾತನಾಡಿದ್ದಾರೆ. ಚೆಂಗಳಪಟ್ಟು ಜಿಲ್ಲೆಯ ಪೆರುಂಗಳತ್ತೂರು ಪ್ರದೇಶದಲ್ಲಿ ಮಳೆ ನೀರು ತುಂಬಿ, ನದಿಯಲ್ಲಿದ್ದ ಮೊಸಳೆಗಳು ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ. ಮೊಸಳೆಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಚೆನ್ನೈನ ಪಲ್ಲಿಕರನೈ, ಮೇಡವಕ್ಕಂ ಮುಂತಾದ ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಇದಲ್ಲದೆ ಈ ಪ್ರದೇಶದ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹರಿದು ವಸತಿ ಪ್ರದೇಶಗಳಿಗಳಲ್ಲಿ ತುಂಬಿ ಹರಿಯುತ್ತಿದೆ. ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಲ್ಲಿಕರಣೆ ಪ್ರದೇಶದ ಖಾಸಗಿ ಅಪಾರ್ಟ್‌ಮೆಂಟ್ ಕಟ್ಟಡಗಳ ಕೆಳಗೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.


Share with

Leave a Reply

Your email address will not be published. Required fields are marked *