ಬಂಟ್ವಾಳ:ಸಮಾಜ ಮುಖಿ ಕೆಲಸದ ಮೂಲಕ ಪ್ರಶಂಸೆಗೆ ಪಾತ್ರವಾದ ಮಹಿಳಾ ಅಧಿಕಾರಿ..!

Share with

ಬಂಟ್ವಾಳ: ಬಂಟ್ವಾಳದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸಮಾಜ ಮುಖಿ ಕೆಲಸದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಬಹು ಮುಖ್ಯ ಸಮಸ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ ರೋಡಿನ ವಿವೇಕನಗರ ರಸ್ತೆಯ ಗುಂಡಿಯನ್ನು ಡಿ. 4 ರಂದು ಸೋಮವಾರ ರಾತ್ರಿ ಕಾಂಕ್ರೀಟ್ ಮಾಡಿಸುವ ಮೂಲಕ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ.

ಬಿ.ಸಿ ರೋಡಿನ ಬಸ್ ನಿಲ್ದಾಣದ ಮುಂಭಾಗದ ಸರ್ವೀಸ್ ರಸ್ತೆಯಿಂದ ವಿವೇಕ ನಗರ ರಸ್ತೆಗೆ ಪ್ರವೇಶ ಮಾಡುವ ಭಾಗದಲ್ಲಿ ರಸ್ತೆಯನ್ನು ಉದ್ದಕ್ಕೆ ಅಗೆದು ಹಾಕಲಾಗಿತ್ತು, ಬಳಿಕ ಅದನ್ನು ಮುಚ್ಚದ ಕಾರಣದಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಹೋಟೆಲ್ ಯೊಂದರ ಮಾಲಕ ನೀರಿನ ಪೈಪ್ ಅಳವಡಿಕೆಯ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕಿ ಹೋಗಿದ್ದರು. ಇದು ಪುರಸಭಾ ಸಹಿತ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಗಳ ಕಣ್ಣಿಗೆ ಬಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ, ಕನಿಷ್ಠ ಪಕ್ಷ ಅಗೆದು ಹಾಕಿದ ವ್ಯಕ್ತಿಯನ್ನು ಕರೆದು ಕಾಂಕ್ರೀಟ್ ಹಾಕಿಸುವ ಕೆಲಸ ಕೂಡ ಮಾಡಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು.

ರಸ್ತೆಯಲ್ಲಿ ಹತ್ತಾರು ಮನೆಗಳಿದ್ದು, ಮಕ್ಕಳ ಆಸ್ಪತ್ರೆ ಹಾಗೂ ಶಾಲೆಯೊಂದಿದೆ. ಇಲ್ಲಿಗೆ ಬಂದು ಹೋಗುವ ವಾಹನ ಸವಾರರು ಜೀವ ಭಯದಿಂದ ವಾಹನಗಳನ್ನು ರಸ್ತೆಗೆ ಇಳಿಸುತ್ತಿದ್ದರು. ಇದನ್ನು ಕಂಡ ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದಿಯಾ ನಾಯಕ್ ಅವರು ಪುರಸಭೆಗೆ ಆರಂಭದಲ್ಲಿ ಮೌಖಿಕವಾಗಿ ತಿಳಿಸಿದ್ದರೆ, ಬಳಿಕ ಲಿಖಿತವಾಗಿ ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಆದರೆ ಯಾವುದಕ್ಕೂ ಸ್ಪಂದಿಸದೆ ಮೌನವಾಗಿದ್ದ ಇಲಾಖೆಯನ್ನು ಕಂಡು ಸ್ವತಃ ಅವರೇ ಕಾಂಕ್ರೀಟ್ ಹಾಕಿಸಿದ್ದಾರೆ. ರಾತ್ರಿ ವೇಳೆ ವಾಹನಗಳ ಓಡಾಟ ಕಡಿಮೆ ಇರುವ ಕಾರಣ ಸೋಮವಾರ ರಾತ್ರಿ ವೇಳೆ ಕಾಂಕ್ರೀಟ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಬಿಂದಿಯಾ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


Share with

Leave a Reply

Your email address will not be published. Required fields are marked *