ಮಂಗಳೂರು: ವ್ಯಕ್ತಿಯೊಬ್ಬರಿಗೆ ಟೆಲಿಗ್ರಾಂ ಆ್ಯಪ್ ಮುಖಾಂತರ ಪಾರ್ಟ್ ಟೈಮ್ ಜಾಬ್ ಎಂದು ರೇಟಿಂಗ್ ನೀಡುವ ಟಾಸ್ಕ್ ನೀಡಿ 27.56 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ದೂರುದಾರರಿಗೆ ಟೆಲಿಗ್ರಾಮ್ ನಲ್ಲಿ ಹೊಟೇಲ್ ಮತ್ತು ಹೋಮ್ ಸ್ಟೇಗಳಿಗೆ ರೇಟಿಂಗ್ ನೀಡುವ ಟಾಸ್ಕ್ ಪೂರ್ಣಗೊಳಿಸುವ ಪಾರ್ಟ್ ಟೈಂ ಜಾಬ್ ಮಾಡಿ ಹಣ ಗಳಿಸಬಹುದೆಂದು ಅಪರಿಚಿತ ವ್ಯಕ್ತಿಯೋರ್ವನಿಂದ ಜೂ.19ರಂದು ಸಂದೇಶ ಬಂದಿತ್ತು ಎನ್ನಲಾಗಿದೆ.
ಅಪರಿಚಿತ ವ್ಯಕ್ತಿಯ ಸಂದೇಶವನ್ನು ನಂಬಿದ ದೂರುದಾರರು ‘Aditi MMT guru’ ಎಂಬ ಗ್ರೂಪ್ ನಲ್ಲಿ 30 ಟಾಸ್ಕ್ ಪೂರ್ಣಗೊಳಿಸಿದ್ದರು. ಇದಕ್ಕಾಗಿ ಆ ಅಪರಿಚಿತ ವ್ಯಕ್ತಿಯು ಲಾಭಾಂಶವೆಂದು 900 ರೂಪಾಯಿಗಳನ್ನು ನೀಡಿದ್ದ, ಮತ್ತದೇ ದಿನ ಪುನಃ 11 ಸಾವಿರ ರೂಪಾಯಿ ಹೂಡಿಕೆ ಮಾಡಿಸಿ ಒಮ್ಮೆ 20 ಸಾವಿರ ಹಾಗೂ ಮತ್ತೊಮ್ಮೆ 70 ಸಾವಿರ ರೂಪಾಯಿಗಳನ್ನು ಲಾಭಾಂಶವೆಂದು ನೀಡಿರುತ್ತಾನೆ. ಇದೇ ರೀತಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ, ಅದರಂತೆ ಜೂ.19ರಿಂದ ಆ.26ರವರೆಗೆ ಹಂತಹಂತವಾಗಿ ಒಟ್ಟು 27,56,129 ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡ ಆತ ಯಾವುದೇ ಲಾಭಾಂಶ ನೀಡದೇ ವಂಚಿಸಿರುತ್ತಾನೆ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.