ಪೈವಳಿಕೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಸರಕಾರಿ ಹಯರ್ ಸೆಕೆಂಡರಿ ಶಾಲೆ ಪೈವಳಿಕೆ ಕಾಯರ್ ಕಟ್ಟೆಯಲ್ಲಿನ ಸುಮಾರು 45ರಷ್ಟು ವಿದ್ಯಾರ್ಥಿಗಳು ಸಂಸ್ಕೃತವನ್ನು ದ್ವಿತೀಯ ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ಸಂಸ್ಕೃತ ಅಧ್ಯಾಪಕರಿಲ್ಲದೆ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಕೆ ಸ್ಥಗಿತಗೊಂಡಿದೆ. ತಕ್ಷಣವೇ ಸಂಸ್ಕೃತ ಅಧ್ಯಾಪಕರನ್ನು ನೇಮಕ ಮಾಡಬೇಕೆಂದು ಶಾಸಕ ಎಕೆಎಮ್ ಅಶ್ರಫ್ ಒತ್ತಾಯಿಸಿದ್ದಾರೆ.
ಹೊಸ ಸ್ಟಾಫ್ ಫಿಕ್ಸೆಷನ್ ನಡೆದಾಗ ಸಂಸ್ಕೃತ ವಿದ್ಯಾರ್ಥಿಗಳಿದ್ದರೂ ದೀರ್ಘಕಾಲ ಅಸ್ತಿತ್ವದಲ್ಲಿದ್ದ ಸಂಸ್ಕೃತ ಹುದ್ದೆಯನ್ನು ತೆಗೆದು ಹಾಕಲಾಗಿತ್ತು. ಇದರ ಬಗ್ಗೆ ಸಂಬಂಧಪಟ್ಟವರಿಗೆ ಮೇಲ್ಮನವಿಯನ್ನು ಸಲ್ಲಿಸಿದರೂ ಇದರ ಬಗ್ಗೆ ಪೂರಕ ಕ್ರಮವನ್ನು ಕೈಗೊಂಡಿಲ್ಲ. 2024 ಮಾರ್ಚ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತ ದ್ವಿತೀಯ ಭಾಷೆಯಾಗಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಅಧ್ಯಾಪಕರಿಲ್ಲದ ಕಾರಣ ಆತಂಕಗೊಂಡಿದ್ದಾರೆ.
ಇದರ ಬಗ್ಗೆ ಹೆತ್ತವರು ವಿದ್ಯಾರ್ಥಿಗಳು ಮನವಿಯನ್ನ ನೀಡಿ ಅಧ್ಯಾಪಕರ ನೇಮಕಾತಿಗಾಗಿ ಒತ್ತಾಯಿಸಿದ್ದರು. ನವ ಕೇರಳ ಸಂಗಮದಲ್ಲೂ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿಯನ್ನು ನೀಡಲಾಗಿತ್ತು. ಅಧಿಕೃತರು ಈವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ, ಅವರ ಪರೀಕ್ಷೆಗೂ ಪರಿಣಾಮ ಬೀರುವಂತಹ ಸಮಸ್ಯೆ ಎದುರಾದರೂ ಸರಕಾರ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಆದಷ್ಟು ಬೇಗ ವಿದ್ಯಾರ್ಥಿಗಳ ಸಂಸ್ಕೃತ ಕಲಿಕೆಗೆ ಅನುಕೂಲವಾಗುವಂತೆ ಅಧ್ಯಾಪಕರನ್ನು ನೇಮಿಸಿ ವಿದ್ಯಾರ್ಥಿಗಳ ಹೆತ್ತವರ ಆತಂಕವನ್ನು ದೂರಿಕರಿಸಬೇಕೆಂದು ಶಿಕ್ಷಣ ಸಚಿವರಿಗೂ ಡಿಜಿಇ ಅವರಿಗೂ ಮನವಿ ಪತ್ರವನ್ನು ಬರೆದು ಶಾಸಕರು ಒತ್ತಾಯಿಸಿದ್ದಾರೆ.