ಪೈವಳಿಕೆ: ಬೇಸಿಗೆಯಲ್ಲಿ ಕುಡಿ ನೀರಿಗಾಗಿ ಪರದಾಡುತ್ತಿರುವಂತೆ ಪಂಚಾಯತ್ ಬಾವಿಗೆ ತ್ಯಾಜ್ಯವನ್ನು ಸುರಿದು ಬಾವಿಯನ್ನು ಉಪಯೋಗ ಶೂನ್ಯಗೊಳಿಸಲಾಗಿದೆ.
ಪೈವಳಿಕೆ ಗ್ರಾಮ ಪಂಚಾಯತ್‌ನ ಬಾಯಾರುಪದವು ಪೇಟೆಯಲ್ಲಿರುವ ಬಾವಿಗೆ ತ್ಯಾಜ್ಯವನ್ನು ಸುರಿದು ಉಪಯೋಗ ಶೂನ್ಯವನ್ನಾಗಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.
ಪಂಚಾಯತ್ ನಿಂದ ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಲಾದ ಈ ಬಾವಿಯಲ್ಲಿ ಬೇಸಿಗೆಯಲ್ಲಿಯೂ ಭಾರೀ ನೀರು ಹೊಂದಿದ್ದು, ಈ ಪ್ರದೇಶದ ಮನೆಯವರು, ವ್ಯಾಪಾರಸ್ಥರು ಈ ಬಾವಿಯನ್ನೇ ಆಶ್ರಯಿಸುತ್ತಿದ್ದರು. ಸುಮಾರು 15ರಿಂದ 20ರಷ್ಟು ಕೋಲು ಆಳದ ಬಾವಿ ಇದಾಗಿದೆ.
ಆದರೆ ಕಳೆದ ಒಂದೆರಡು ವರ್ಷಗಳಿಂದ ಬಾವಿಗೆ ನಿರಂತರ ವಿವಿಧ ಕಡೇಗಳಿಂದ ರಾತ್ರಿ ಹೊತ್ತಲ್ಲಿ ತ್ಯಾಜ್ಯವನ್ನು ತಂದು ಸುರಿದು ಬಾವಿಯ ನೀರನ್ನು ಮಲಿನಗೊಳಿಸಲಾಗಿರುವುದಾಗಿ ದೂರಲಾಗಿದೆ. ಇದೀಗ ತ್ಯಾಜ್ಯ ತುಂಬಿಕೊಂಡು ನೀರು ಪೂರ್ತಿ ಬತ್ತಿ ಹೋಗಿ ಬಾವಿ ಮುಚ್ಚುಹೋಗುವ ಹಂತಕ್ಕೆ ತಲುಪಿದ್ದು, ಪರಿಸರ ಪೊದೆಗಳು ತುಂಬಿ ಶೋಚನೀಯವಸ್ಥೆಗೆ ತಲುಪಿದೆ.
ಲಕ್ಷಾಂತರ ರೂ ವೆಚ್ಚದಿಂದ ನಿರ್ಮಿಸಲಾದ ಈ ಬಾವಿ ಉಪಯೋಗ ಶೂನ್ಯಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಪಂಚಾಯತ್ ಅಧಿಕೃತರು ಎಚ್ಚೆತ್ತುಕೊಂಡು ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕೆಂದು ಈ ಬಾವಿಯನ್ನು ದುರಸ್ಥಿಗೊಳಿಸಿ ಇದರ ನೀರಿನ ಪ್ರಯೋಜನವನ್ನು ಪಡೆಯುವಂತೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.