ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತ ಕಾಲನಿ ಎಂಬಲ್ಲಿ ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಡಿ.13ರಂದು ತಡರಾತ್ರಿ ವೇಳೆ ಸಂಭವಿಸಿದೆ.
ಸಾರಸ್ವತ ಕಾಲನಿ ನಿವಾಸಿ ವರುಣ್(28) ಹತ್ಯೆಯಾದವರು ಎಂದು ತಿಳಿದು ಬಂದಿದೆ. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ ಐದು ಮಂದಿಯ ನಡುವೆ ವಾಗ್ವಾದ ನಡೆದು ಸೂರಜ್, ವರುಣ್ ಹೃದಯಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆ ನಡೆಸಿದ್ದಾನೆ.
ಹಳೇ ವೈಷಮ್ಯದಿಂದ ಕೃತ್ಯ ನಡೆದಿರುವ ಸಾಧ್ಯತೆಗಳಿದ್ದು, ಸೋಮೇಶ್ವರ ಪುರಸಭೆಗೆ ಡಿ.27ಕ್ಕೆ ಚುನಾವಣೆಯೂ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೆಲವೇ ದಿನಗಳು ಬಾಕಿಯಿದೆ. ಈ ಸಂಬಂಧವೂ ಗಲಾಟೆ ನಡೆದಿರುವ ಸಾಧ್ಯತೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.