ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023′ ಡಿ.14ರಿಂದ 17ರವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಮೂಡುಬಿದಿರೆಯ ವಿದ್ಯಾಗಿರಿ ‘ಆಳ್ವಾಸ್ ವಿರಾಸತ್-2023’ಕ್ಕೆ ತಳಿರು ತೋರಣದೊಂದಿಗೆ ಸಜ್ಜಾಗಿದೆ.
ಡಿ.14ರಿಂದ 17ರವರೆಗೆ ಸಂಜೆ 5ರಿಂದ ರಾತ್ರಿ 10ರ ವರೆಗೆ ಸಾಂಸ್ಕೃತಿಕ ವೈಭವ ನಡೆಯಲಿದ್ದು, ದೇಶ-ವಿದೇಶದ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 10ರ ವರೆಗೆ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ ಹಾಗೂ ಛಾಯಾಚಿತ್ರಗಳ ಪ್ರದರ್ಶನಗಳು ಜನರನ್ನು ಆಕರ್ಷಿಸಲಿವೆ. ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ನಿಮ್ಮನ್ನು ಕೈಬೀಸಿ ಕರೆಯುತ್ತಿವೆ
ಡಿ.14ರಂದು ಸಂಜೆ 5.45ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರಾಸತ್ ಉದ್ಘಾಟಿಸಲಿದ್ದಾರೆ. ಸಂಜೆ 6.35ಕ್ಕೆ ಭವ್ಯ ಸಾಂಸ್ಕೃತಿಕ ಮೆರವಣಿಗೆ, ಸಾಂಸ್ಕೃತಿಕ ರಥ ಸಂಚಲನ ನಡೆಯಲಿದೆ.