ಬಂಟ್ವಾಳ: ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಕೊನೆಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.
ಲೊರೆಟ್ಟೊ ನಿವಾಸಿಯೊಬ್ಬರ ಪತ್ನಿಗೆ ನರಿಕೊಂಬು ನಿವಾಸಿ ತಸ್ಲೀಂ ಆರೀಫ ಅತ್ಯಾಚಾರ ಎಸಗುವುದರ ಜೊತೆಗೆ ಕೊಲೆ ಬೆದರಿಕೆ ಹಾಕಿರುತ್ತಾನೆ.
ಆರೋಪಿ ತಸ್ಲೀಂ ಆರೀಫ ಎಂಬುವವ ದೂರುದಾರ ಮಹಿಳೆಯ ಪತಿ ಅಬ್ದುಲ್ ಅಜೀಜ್ ಅವರ ಸ್ನೇಹಿತ ಆಗಿದ್ದು, ಆಗಾಗ ಪತಿಯೊಂದಿಗೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಬಳಿಕ ಆರೋಪಿ ಹಾಗೂ ಮಹಿಳೆ ನಡುವೆ ಸಲುಗೆ ಉಂಟಾಗಿ ಮೊಬೈಲ್ ನಂಬರ್ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಕೊನೆಗೆ ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ಸುಳ್ಳು ಹೇಳಿಕೊಂಡು ಹಲವಾರು ಬಾರಿ ದೈಹಿಕ ಸಂರ್ಪಕ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸ್ನೇಹಿತ ಹಾಗೂ ಹೆಂಡತಿಯ ವಿಷಯ ತಿಳಿದ ಪತಿ ಅವಳಿಂದ ದೂರಾಗಿದ್ದ. ಬಳಿಕ ಆರೋಪಿಯೊಂದಿಗೆ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ಧಳು. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಮಹಿಳೆಗೆ ಮುಖ, ಬಾಯಿಗೆ ಹೊಡೆದು, ಸೊಂಟಕ್ಕೆ ಒದ್ದಿರುವುದಲ್ಲದೆ, ತಲೆ ಕೂದಲನ್ನು ಎಳೆದು ಅವ್ಯಾಚ ಶಬ್ದಗಳಿಂದ ಬೈದಿದ್ದಾನೆ. ಜೊತೆಗೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿದ್ದಾನೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.