ಪಡುಬಿದ್ರೆ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಮರಳು ಸಹಿತ ಪಡುಬಿದ್ರೆ ಪೊಲೀಸರು ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ನಯಾತ್ ಕಟ್ಟಡದ ಮುಂಭಾಗದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಟಿಪ್ಪರ್ ಮಾಲಕ ಗುರುಪುರದ ರಾಜೇಶ್ ಹಾಗೂ ಚಾಲಕ ನಂದಿಕೂರು ದೇವಸ್ಥಾನ ಬಳಿಯ ನಿವಾಸಿ ಸರ್ಫ್ರಾಜ್ ಎಂಬವರ ವಿರುದ್ಧ ದೂರು ದಾಖಲಾಗಿದೆ.
ಟಿಪ್ಪರ್ ಮಾಲಿಕನ ಸೂಚನೆಯಂತೆ ಮರಳು ತುಂಬಿಸಿ ಪಡುಬಿದ್ರಿ ಬೀಚ್ ಕಡೆ ಸಾಗಿಸಲು ಹೊರಟಿದ್ದ ಟಿಪ್ಪರನ್ನು ಪಡುಬಿದ್ರಿ ಪಿಎಸ್ ಐ ಪ್ರಸನ್ನ ಎಂ.ಎಸ್ ಅವರು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದಾಳಿಯ ವೇಳೆ ಟಿಪ್ಪರ್ ನಲ್ಲಿ ಮೂರು ಯುನಿಟ್ ಮರಳು ಪತ್ತೆಯಾಗಿದ್ದು, ಮರಳಿನ ಪರವಾನಿಗೆ ಸಹಿತ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲದಿರುವ ಕಾರಣಕ್ಕೆ ಮರಳು ಸಹಿತ ವಾಹನ ವಶಕ್ಕೆ ಪಡೆದು ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ.