ಪುತ್ತಿಗೆ : ಅಂಗಡಿಮೊಗರು ಸಮೀಪದ ಇತಿಹಾಸ ಪ್ರಸಿದ್ದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿ ಜರಗುವ ಧನುಪೂಜಾ ಮಹೋತ್ಸವ ರವಿವಾರದಂದು ಪ್ರಾರಂಭಗೊಂಡಿತು.
ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಒಂದು ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವ ಧನುಪೂಜಾ ಮಹೋತ್ಸವದಲ್ಲಿ ಪ್ರಥಮ ದಿನ ಮಹಾದೇವ ಭಟ್ ಕೋಣಮ್ಮೆ ಮತ್ತು ಹವ್ಯಕ ಪರಿಷತ್ ಮುಳ್ಳೇರಿಯ ಬಳಗ ರುದ್ರಾ ಪಾರಯಣಗೈದಿತು. ಪ್ರತಿದಿನ ಬೆಳಗ್ಗೆ ವಿಶೇಷ ದೀಪಾರಾಧನೆ, ವಿವಿಧ ತಂಡಗಳ ಭಜನೆ ಸಂಕೀರ್ತನೆ, ಬೆಳಗ್ಗೆ 6 ಗಂಟೆಗೆ ಪೂಜೆ ಬಳಿಕ ಪ್ರಸಾದ ವಿತರಣೆ ಜರಗಲಿದೆ.
ಕಾಡು ವನಗಳ ನಡುವೆ ಪ್ರಕೃತಿ ರಮಣೀಯತೆಯಿಂದ ಕೂಡಿದ ದೇಲಂಪಾಡಿ ಕ್ಷೇತ್ರದಲ್ಲಿ ಜರಗುವ ಧನುಪೂಜಾ ಮಹೋತ್ಸವವು ಜಿಲ್ಲೆಯಲ್ಲಿಯೇ ಅತ್ಯಂತ ವ್ಯವಸ್ಥಿತ ಮತ್ತು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಪ್ರತಿದಿನ ನೂರಾರು ಭಕ್ತರು ಧನುಪೂಜಾ ಸಂದರ್ಭದಲ್ಲಿ ಪ್ರಾತಃಕಾಲ ಈ ಕ್ಷೇತ್ರಕ್ಕೆ ಸಂದರ್ಶಿಸಿ ಪೂಜಾ ಸೇವೆಗಳನ್ನು ಮಾಡಿ ಕೃತಾರ್ಥರಾಗುತ್ತಿದ್ದಾರೆ. ಹಲವು ಆಸ್ತಿಕರ ಹರಕೆಗಳು ಈ ಕ್ಷೇತ್ರ ಭೇಟಿಯಿಂದಾಗಿ ಧನುಪೂಜೆಯ ಒಂದು ತಿಂಗಳೊಳಗೆ ಫಲಿಸಿದ ದೃಷ್ಠಾಂತಗಳಿವೆ. ಪ್ರತಿದಿನ ಭೇಟಿ ನೀಡುವ ಭಕ್ತರನ್ನು,ಅತಿಥಿಗಳನ್ನು ಸತ್ಕರಿಸುವ ರೀತಿ ಇಲ್ಲಿನವರದ್ದು ಇತರೇ ಕ್ಷೇತ್ರಕ್ಕಿಂತಲೂ ಅನನ್ಯವಾಗಿದೆ. ಪೂಜೆಯಾದ ಬಳಿಕ ಪ್ರತಿದಿನ ಚಾ ಕಾಫಿ ಫಲಹಾರ ಸಿಹಿತಿಂಡಿಗಳನ್ನು ವಿತರಿಸಲಾಗುತ್ತಿದೆ.ಇಲ್ಲಿ ಸೇರುವ ಭಕ್ತ ಜನ ಸಂದೋಹಕ್ಕೆ ಫಲಹಾರ ತಿಂಡಿ ನೀಡಲು ಹಾಗೂ ಕ್ಷೇತ್ರದಲ್ಲಿ ಭಜನಾ ಸೇವೆ ನಡೆಸಲು ವರ್ಷಗಳ ಹಿಂದೆಯೇ ಮುಂಗಡ ಬುಕ್ಕಿಂಗ್ ಮಾಡುವವರಿದ್ದಾರೆ. ಭಕ್ತರ ಹಾಗೂ ಕೊಡುಗೈ ದಾನಿಗಳ ಆರ್ಥಿಕ ರೂಪದ ಸಹಕಾರದಿಂದ ವರ್ಷಂಪ್ರತಿ ಕ್ಷೇತ್ರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಧನುಪೂಜೆಯ ಕೊನೆಯ ದಿನ ಜ.14ರಂದು ಸಮಾರೋಪ ಸಮಾರಂಭ ನಡೆಯುತ್ತದೆ.