ಬೆಳ್ತಂಗಡಿ: ಮಹಿಳೆಯೊಬ್ಬರು ಸರಕಾರಿ ಬಸ್‌ಗೆ ಹತ್ತುವಾಗ ಕರಿಮಣಿ ಸರ ಕಳ್ಳತನವಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ತಮಿಳುನಾಡು ರಾಜ್ಯದ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿರುಪುರ್ ಜಲ್ಲೆಯ ಮೋಹಿನಿ ಯಾನೆ ಮಾರಿಮುತ್ತು (35) ಮತ್ತು ದಿವ್ಯಾ ಯಾನೆ ಕಾಮಾಚಿ (30) ಬಂಧಿತ ಆರೋಪಿಗಳು. ಸರಕಾರಿ ಉದ್ಯೋಗಿಯಾಗಿರುವ ವಾರಿಜಾ ಅವರು ಡಿ.12ರಂದು ಸರಕಾರಿ ಬಸ್ ಹತ್ತುವ ವೇಳೆ 24 ಗ್ರಾಮ್ ತೂಕದ ಚಿನ್ನದ ಕರಿಮಣಿ ಸರ ಕಳ್ಳತನ ಆಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಅದರಂತೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಉಪ ನಿರೀಕ್ಷಕರಾದ ಚಂದ್ರಶೇಖರ್ ಮತ್ತು ತಂಡದ ಪೊಲೀಸರು ತಮಿಳುನಾಡು ಮೂಲದ ಇಬ್ಬರು ಕಳ್ಳಿಯರನ್ನು ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಡಿ.20ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ ಕರಿಮಣಿ ಸರವನ್ನು ಪೊಲೀಸರಿಗೆ ನೀಡಿದ್ದಾರೆ.
ಆರೋಪಿಗಳ ಮೇಲೆ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಮೂಲ್ಕಿ ಮತ್ತು ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದೆಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇಬ್ಬರು ಆರೋಪಿಗಳನ್ನು ಸಂಜೆ ನ್ಯಾಯಾಧೀಶರ ಬಳಿ ಹಾಜರುಪಡಿಸಿದ್ದು ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.