ಮಂಜೇಶ್ವರ: ಹೊಸಂಗಡಿ ರೈಲ್ವೆ ಗೇಟ್ ಹಾನಿಗೀಡಾಗಿ ಪದೇ ಪದೇ ಗಂಟೆಗಳ ಕಾಲ ಮುಚ್ಚುತ್ತಿರುವುದರಿಂದ ಬಂಗ್ರಮಂಜೇಶ್ವರ ರಸ್ತೆಯಲ್ಲಿ ತೆರಳುವ ನೂರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ಜನರು ತೊಂದರೆಗೀಡಾಗುತ್ತಿರುವ ಘಟನೆ ನಡೆಯುತ್ತಿದೆ.
ಡಿ.20ರಂದು ರಾತ್ರಿ ರೈಲು ಹಾದು ಹೋದ ಬಳಿಕ ಗೇಟ್ ತೆರೆಯಲು ಸಾಧ್ಯವಾಗದೆ ಡಿ.21ರಂದು ಬೆಳಿಗ್ಗೆ ತನಕ ಮುಚ್ಚಿಕೊಂಡಿದ್ದು, ಸುಮಾರು 10ಗಂಟೆಗೆ ದುರಸ್ಥಿಗೊಳಿಸಿ ತೆರೆಯಲಾಯಿತು.
ಈ ಹಿಂದೆ ಕೂಡಾ ಹಲವು ಬಾರಿ ಇದೇ ರೀತಿ ಮುಚ್ಚಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಮುಚ್ಚುಗಡೆಗೊಂಡಲ್ಲಿ ಬಂಗ್ರಮಂಜೇಶ್ವರ ಸಹಿತ ಪರಿಸರ ಪ್ರದೇಶಕ್ಕೆ ಸಂಚರಿಸುವ ನೂರಾರು ಮಂದಿ ಮಂಜೇಶ್ವರ ಹತ್ತನೇ ಮೈಲು ಹಾಗೂ ಇತರ ಒಳ ರಸ್ತೆಯಿಂದ ಸುತ್ತು ಬಳಸಿ ಸಂಚರಿಸಬೇಕಾದ ಅವಸ್ಥೆ ಉಂಟಾಗಿರುವುದಾಗಿ ಸಾರ್ವಜನಿಕರು ದೂರಲಾಗಿದೆ. ಒ
ಒಳಪ್ರದೇಶದಲ್ಲಿ ಪೋಲೀಸ್ ಷ್ಟೇಶನ್, ವಿದ್ಯುತ್ ಕಚೇರಿ, ವಿಲೇಜ್ ಕಚೇರಿ, ಬ್ಯಾಂಕ್‌ಗಳು, ಸರಕಾರಿ ಆಸ್ಪತ್ರೆ, ಶಾಲೆಗಳು ಸಹಿತ ಹಲವು ಸರಕಾರಿ ಕಚೇರಿಗಳು ಒಳಗೊಂಡ ಪ್ರದೇಶವಾಗಿದೆ. ವ್ಯವಸ್ಥಿತ ಗೇಟ್‌ನ್ನು ನಿರ್ಮಿಸಿ ಹಾನಿಗೀಡಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.