ಕಡಬ: ಕ್ರೆಟಾ ಕಾರು ಹಾಗೂ ಮಾರುತಿ ಓಮ್ನಿ ನಡುವೆ ನಡೆದ ರಸ್ತೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ 8 ಮಂದಿ ಗಾಯಗೊಂಡ ಘಟನೆ ಧರ್ಮಸ್ಥಳ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಡಿ.23ರಂದು ಮಧ್ಯಾಹ್ನ ನಡೆದಿದೆ.
ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ನಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಓಮ್ನಿ ಚಲಾಯಿಸುತ್ತಿದ್ದ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ (53) ಅವರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ರವಿ ಅವರ ತಾಯಿ ಮಣಿಯಮ್ಮ(75), ಪತ್ನಿ ವಾಣಿ (47), ಪುತ್ರಿ ರಿಷಾ (19), ಪುತ್ರ ಶರಣ್ (10), ಸಹೋದರ ಯೋಗೇಶ್ (55), ಅವರ ಪತ್ನಿ ನೀತು (45), ಪುತ್ರಿ ನೇಹಾ (24), ಪುತ್ರ ಅಂಜನ್ (14) ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.