ಉಳ್ಳಾಲ: ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ತನ್ನನ್ನು ಸಮರ್ಪಿಸಿಕೊಂಡ ಮೇರು ಸಾಹಿತಿ, ಹಿರಿಯ ವಿದ್ವಾಂಸ, ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ, ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಯನ್ನು ಹೊರತಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯವಾದುದನ್ನು ಸಾಧಿಸಿದ ಪ್ರೊ.ಅಮೃತ ಸೋಮೇಶ್ವರ(88) ಅವರು ವಯೋಸಹಜವಾಗಿ ಜ.6ರಂದು ಬೆಳಗ್ಗೆ ಸ್ವಗೃಹ ಸೋಮೇಶ್ವರದ “ಒಲುಮೆ”ಯಲ್ಲಿ ನಿಧನರಾಗಿದ್ದಾರೆ.

ಸೋಮೇಶ್ವರ ನಿವಾಸಿಯಾಗಿದ್ದ ಅಮೃತ ಸೋಮೇಶ್ವರ ಅವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕನ್ನಡ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ವೈವಿಧ್ಯಮಯ ಹಾಗೂ ವಿಸ್ತೃತವಾದ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಯಕ್ಷಗಾನದ ಬಗ್ಗೆ ವ್ಯಾಪಕ ಸಂಶೋಧನೆ, ಅಧ್ಯಯನ, ಆವಿಷ್ಕಾರ, ಕೃತಿರಚನೆ ಅವರ ಇನ್ನೊಂದು ಪ್ರಮುಖ ಕಾರ್ಯಕ್ಷೇತ್ರವಾಗಿತ್ತು.
ಅಗಲಿದ ಜನಪದ ವಿದ್ವಾಂಸ, ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಇವರ ಪಾರ್ಥೀವ ಶರೀರ ಸಂಜೆ 5ರ ನಂತರ ಸೋಮೇಶ್ವರ ಶಿವಶಕ್ತಿನಗರದ ‘ಒಲುಮೆ’ ತಮ್ಮ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಜ.7ರಂದು ಮಧ್ಯಾಹ್ನ 11ರ ವೇಳೆಗೆ ಅಂತಿಮ ಸಂಸ್ಕಾರ ಮಾಡೂರು ಸ್ಮಶಾನದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.