ಜೈಪುರ: ರಾಜಾಸ್ಥಾನದ ಸಂಗಾನೇರಿ ಗೇಟ್ ಬಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರಲ್ಲಿ 21 ವರ್ಷದ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.
ರಾಜಸ್ಥಾನದ ದೌಸಾ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ಕಡಿಮೆ ತೂಕ ಮತ್ತು ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ನಾಲ್ಕೂ ಮಕ್ಕಳನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ತಾಯಿಯ ಸ್ಥಿತಿ ಕೂಡ ಅಸ್ತವ್ಯಸ್ಥಗೊಂಡಿದ್ದು ಆಕೆಗೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡಾಕ್ಟರ್ ಆಶಾ ಅವರು ನಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿರೋದು. ಈ ಹಿಂದೆ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ ದಾಖಲೆ ಇತ್ತು. ನಾಲ್ವರು ಮಕ್ಕಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳಲಾಗುತ್ತಿದೆ. ಅವಧಿ ಪೂರ್ವವೇ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೋಮವಾರ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಆಕೆಯನ್ನು ಸಹ ತೀವ್ರಾ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದು ಮಗುವಿನ ತೂಕ 900 ಗ್ರಾಂಗಿಂತಲೂ ಕಡಿಮೆ ಇದೆ. ಎರಡು ಮಕ್ಕಳ ತೂಕ ಒಂದು ಕೆಜಿ ಇದ್ದು, ಮತ್ತೊಂದು ಕೇವಲ 700ಗ್ರಾಂ ತೂಕ ಹೊಂದಿದೆ. ಸಾಮಾನ್ಯವಾಗಿ ಆರೋಗ್ಯಕರ ನವಜಾತ ಶಿಶು 2.5 ರಿಂದ 3 ಕೆಜಿ ಹೊಂದಿರುತ್ತೆ ಎಂದು ಹೇಳಿದ್ದಾರೆ.