ಉಡುಪಿ: ತಾಯಿಯ ಎದೆ ಹಾಲು ಕುಡಿದು ಮಲಗಿದ್ದ ಮಗುವೊಂದು ಹಠಾತ್ ಆಗಿ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಬಿಲ್ಲುಕೇರಿ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ಬಿಲ್ಲುಕೇರಿಯ ಜನಾರ್ಧನ ಹಾಗೂ ಅನಿತಾ ದಂಪತಿಯ ಪುತ್ರ ಸಂಕೇತ ಎಂದು ಗುರುತಿಸಲಾಗಿದೆ. ಅನಿತಾ ಅವರು 42 ದಿನಗಳ ಹಿಂದೆಯಷ್ಟೇ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಸೋಮವಾರ ಬೆಳಿಗ್ಗೆ 9 ಗಂಟೆಗೆ ಮನೆಯಲ್ಲಿ ಸಂಕೇತ್ ಗೆ ಎದೆಹಾಲು ಕುಡಿಸಿ ಮಲಗಿಸಿದ್ದರು. ಬಳಿಕ ಪುನಃ ಎಚ್ಚರಗೊಂಡ ಮಗುವಿಗೆ ಎದೆಹಾಲು ಕುಡಿಸಿ ಮಲಗಿಸಿದ್ದರು.
ಬೆಳಿಗ್ಗೆ 11.15ಕ್ಕೆ ಮಗು ಎಚ್ಚರಗೊಂಡಾಗ ಮೈ ತಣ್ಣಗಾಗಿದ್ದು, ಯಾವುದೇ ಚಟುವಟಿಕೆ ಇರಲಿಲ್ಲ. ಇದನ್ನು ಗಮನಿಸಿದ ಮಗುವಿನ ತಂದೆ ಜನಾರ್ದನ ಅವರು ಬೈಂದೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.