ಉಡುಪಿ: ಸ್ನೇಹಿತರ ಜೊತೆಗೆ ಈಜಲು ತೆರಳಿದ ಬಾಲಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ.
ಬೆಳಪು ವಸತಿ ಬಡಾವಣೆಯ ಕಸ್ತೂರಿ ಎಂಬುವವರ ಪುತ್ರ ವಿಶ್ವಾಸ್ ನಾಯಕ್ (11) ಮೃತ ದುರ್ದೈವಿಯಾಗಿದ್ದು, ಈತ ಇನ್ನಂಜೆ ಎಸ್.ಎಸ್ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಯಾಗಿದ್ದು, ಗುರುವಾರ ಶಾಲೆಯಿಂದ ಬಂದವನು ಸ್ನೇಹಿತರ ಜೊತೆ ಕೆರೆಗೆ ಈಜಲು ತೆರಳಿದ್ದ ಎಂದು ತಿಳಿದು ಬಂದಿದೆ.
ಈಜುತ್ತಿದ್ದ ವಿಶ್ವಾಸ್ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡ ಆತನ ಸ್ನೇಹಿತರು ಮಹಿಳೆಯೊಬ್ಬರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಕೆರೆಯಿಂದ ವಿಶ್ವಾಸ್‌ನನ್ನು ಮೇಲಕ್ಕೆತ್ತಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.