ಮಂಗಳೂರು: ನಗರದ ಜೆಪ್ಪುವಿನ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ಅವರ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಮಂಗಳವಾರದಂದು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ ಜೊತೆ ಚರ್ಚಿಸಿ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ಘಟನೆ ಹಾಗೂ ಬಳಿಕ ನಡೆದ ವಿದ್ಯಮಾನಗಳ ಕುರಿತಂತೆ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸತ್ಯಶೋಧನಾ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ರಮಾನಾಥ ರೈ ಅವರು ಜೆರೋಸಾ ವಿದ್ಯಾಸಂಸ್ಥೆಯಲ್ಲಿ ನಡೆದ ಘಟನೆಯ ಆರೋಪದ ಬಗ್ಗೆ ಸತ್ಯಾಸತ್ಯತೆ ತನಿಖೆ ಆಗಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಅನ್ನೋದು ನಮ್ಮ ಆಶಯವಾಗಿದೆ. ಕೆಲವರು ಪ್ರಚೋದನೆ ಮಾಡಬಹುದು, ಆದರೆ ಆ ಕೂಟದಲ್ಲಿ ನಾವಿಲ್ಲ. ಇವತ್ತು ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಸರ್ಕಾರ ಇದರ ಬಗ್ಗೆ ಒಂದು ಸತ್ಯಶೋಧನ ಸಮಿತಿ ಮಾಡಬೇಕು. ಇದು ಘರ್ಷಣೆಗೆ ಕಾರಣ ಆಗಬಾರದು ಎಂದರು.
ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಘಟನೆಯ ಸತ್ಯಾಸತ್ಯತೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಗೆ ಕಾಂಗ್ರೆಸ್ ನಿಯೋಗವು ಭೇಟಿ ನೀಡಿದೆ. ಈ ಘಟನೆಯ ಕುರಿತು ಸಂಬಂಧಪಟ್ಟ ಇಲಾಖೆ, ಸಚಿವರು, ಜಿಲ್ಲಾಡಳಿತ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸಮಗ್ರ ತನಿಖೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರೆ ಫರ್ಝಾನ, ಮುಖಂಡರಾದ ಜೆ.ಆರ್ ಲೋಬೋ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಭಾಸ್ಕರ ಮೊಯ್ಲಿ, ವಿಶ್ವಾಸ್ ದಾಸ್ ಮೊದಲಾದವರಿದ್ದರು.