ಉಡುಪಿ: ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ಮಾ.2ರ ರಾತ್ರಿ ತನ್ನದೇ ಮನೆಯಲ್ಲಿ ಆಗಂತುಕರು ಹಾರಿಸಿದ ಗುಂಡಿಗೆ ಬಲಿಯಾದ ಕೃಷ್ಣನ ಹತ್ಯೆ ನಡೆದು ಇಂದಿಗೆ 13 ದಿನಗಳು ಉರುಳಿದೆ.
ಹತ್ಯೆ ನಡೆದ ಕೆಲವು ದಿನಗಳ ಬಳಿಕ ಮನೆಯೊಳಗಿದ್ದ ಟ್ರಂಕ್ ಕಾಣೆಯಾಗಿದೆ ಎಂದು ಕುಟುಂಬಸ್ಥರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಟ್ರಂಕ್ ನ ಒಳಗೇನಿತ್ತು ಎಂಬುದು ಇಲಾಖೆಗೆ ಯಕ್ಷಪ್ರಶ್ನೆಯಾಗಿದೆ.
ಮೃತ ಕೃಷ್ಣನ ಮೊಬೈಲ್ ಅನ್ನು ಪೋಲಿಸರು ವಶಕ್ಕೆ ಪಡೆದು ಪ್ರಾಥಮಿಕ ತನಿಖೆಯನ್ನು ನಡೆಸಿ, ಸಿಡಿಆರ್ ಪಡೆದಿದ್ದಾರೆ. ಅದರಲ್ಲಿ ಹೆಚ್ಚಿನ ಮಾಹಿತಿಗಳು ದೊರಕದ ಹಿನ್ನಲೆಯಲ್ಲಿ ಮೊಬೈಲ್ ಅನ್ನು ಬೆಂಗಳೂರಿನ ಎಫ್.ಎಸ್.ಎಲ್ ಗೆ ಕಳುಹಿಸಲಾಗಿದೆ. ಅಲ್ಲಿ ಕೃಷ್ಣನ ಮೊಬೈಲ್ ವ್ಯಾಟ್ಸಾಪ್ ಚಾಟ್, ಅನುಮಾಸ್ಪದ ಆ್ಯಪ್ ಗಳನ್ನು ಬಳಸುತ್ತಿದ್ದನೇ, ಯಾರ ಜೊತೆಗೆ ಅತೀ ಹೆಚ್ಚು ಸಂಪರ್ಕದಲ್ಲಿ ಇದ್ದ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದ್ದು, ಅದರಲ್ಲಿ ತನಿಖೆಗೆ ಸಹಾಯವಾಗುವ ಮಾಹಿತಿ ದೊರಯಬಹುದೆಂಬ ನಿರೀಕ್ಷೆಯನ್ನು ತನಿಖಾಧಿಕಾರಿ ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ ಹಾಸನದ ಜಿಲ್ಲೆಯ ಬೇಲೂರು ಬಳಿ ಅಕ್ರಮ ಪಿಸ್ತೂಲು ಹೊಂದಿದ್ದ ವ್ಯಕ್ತಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಾವರದಲ್ಲಿ ನಡೆದ ಹತ್ಯೆಗೂ, ಈ ವ್ಯಕ್ತಿಗಳಿಗೂ ಸಂಬಂಧ ಇದೆಯಾ ಎಂದು ಪರಿಶೀಲಿಸಲು ಒಂದು ತಂಡ ಹಾಸನಕ್ಕೆ ತೆರಳಿದ್ದು, ಮತ್ತೊಂದು ತಂಡ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ.