ಮಹಮ್ಮದಲಿ ಕುಟುಂಬಕ್ಕೆ ಮಾಸಿಕ ರೇಶನ್ ಹಾಗೂ ಸಹೋದರನ ವಿದ್ಯಾಭ್ಯಾಸಕ್ಕೆ ನಿರಂತರ ನೆರವು ಘೋಷಣೆ
ಬಂಟ್ವಾಳ: ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ಶಿಕ್ಷಕರೊಬ್ಬರ ಮನೆಯ ಬಾವಿಗಿಳಿದು ಕೆಲಸ ಮಾಡುತ್ತಿದ್ದಾಗ ಉಸಿರುಗಟ್ಟಿ ಮೃತರಾದ ಬಾಕ್ರಬೈಲು ಸಮೀಪದ ಮಲಾರು ನಿವಾಸಿ ಮಹಮ್ಮದಲಿ (21) ಹಾಗೂ ಪರ್ತಿಪಾಡಿಯಲ್ಲಿ ನೆಲೆಸಿರುವ ಮೂಲತಃ ಕುಕ್ಕಿಲ ನಿವಾಸಿ ಇಬ್ರಾಹಿಂ (36) ಅವರ ನಿವಾಸಕ್ಕೆ ಬುಧವಾರ (24-04) ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಮತ್ತು ಸದಸ್ಯರ ನಿಯೋಗ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿ ಬಡತನದಲ್ಲಿರುವ ಮೃತ ಯುವಕ ಮಹಮ್ಮದಲಿ ಕುಟುಂಬಕ್ಕೆ ಪರಿಹಾರ ಘೋಷಿಸಿದೆ.
ಪಿಯುಸಿ ವಿಧ್ಯಾಭ್ಯಾಸ ಮುಗಿಸಿದ ಬಳಿಕ ಮನೆಯ ಕಷ್ಟ ಕಂಡು ಬಾವಿ ಕೆಲಸಕ್ಕೆ ಹೋಗಿ ಕುಟುಂಬಿಕರ ಜೀವನ ಸಾಗಿಸುತ್ತಿದ್ದ ಮಹಮ್ಮದಲಿಯ ತಂದೆ ಅನಾರೋಗ್ಯ ಪೀಡಿತರಾದರೂ ಹೋಟೆಲ್ ಕಾರ್ಮಿಕರಾಗಿದ್ದರು. ಮೃತ ಮಹಮ್ಮದಲಿಗೆ ಇಬ್ಬರು ಸಹೋದರಿಯರು. ಒಬ್ಬಳಿಗೆ ಮದುವೆಯಾಗಿದ್ದು, ಇನ್ನೊಬ್ಬಳು ವಿವಾಹ ಪ್ರಾಯ ಕಳೆದರೂ ಮದುವೆ ಮಾಡಿಸಲಾಗದೇ ಮನೆಯಲ್ಲಿದ್ದಾಳೆ. ಒಬ್ಬ ಸಹೋದರ ರಿಯಾಝ್ ಕುರ್ನಾಡು ಸರಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕುಟುಂಬಕ್ಕೆ ಮಾಸಿಕ ತಲಾ ರೂ. ಮೂರು ಸಾವಿರದ ಒಂದು ವರ್ಷದ ರೇಶನ್, ಸಹೋದರನ ವಿದ್ಯಾಭ್ಯಾಸಕ್ಕೆ ನಿರಂತರ ನೆರವು ನೀಡಲು ಜಮೀಯ್ಯತುಲ್ ಫಲಾಹ್ ತೀರ್ಮಾನಿಸಿದೆ.
ಇನ್ನೋರ್ವ ಮೃತ ವ್ಯಕ್ತಿ ಇಬ್ರಾಹಿಂ ವಿವಾಹಿತರಾಗಿದ್ದು, 3 ಮತ್ತು 5ನೇ ತರಗತಿಯ ಎರಡು ಪುಟ್ಟ ಗಂಡು ಮಕ್ಕಳ ತಂದೆಯಾಗಿದ್ದಾರೆ. ನಿನ್ನೆ ಪಡಿಬಾಗಿಲು ಎಂಬಲ್ಲಿ ಶಿಕ್ಷಕರೊಬ್ಬರ ಬಾವಿಯನ್ನು ಸ್ವಚ್ಛಗೊಳಿಸಲು ಮಹಮ್ಮದಲಿ ಇಳಿದ ವೇಳೆ ಉಸಿರುಗಟ್ಟುತ್ತಿದೆ ಎಂದು ಬೊಬ್ಬೆ ಹೊಡೆದಾಗ ತಕ್ಷಣ ಬಾವಿಗೆ ಇಳಿದು ರಕ್ಷಿಸಲು ಮುಂದಾದ ಇಬ್ರಾಹಿಂ ಕೂಡಾ ಉಸಿರುಗಟ್ಟಿ ಇಬ್ಬರೂ ಸ್ಥಳದಲ್ಲೇ ಅಸುನೀಗಿದರು. ಇಬ್ಬರು ಯುವಕರನ್ನು ಬಲಿ ತೆಗೆದ ಈ ದುರ್ಘಟನೆ ನಾಡಿನ ಜನತೆಯನ್ನು ದುಖದ ಮಡುವಿನಲ್ಲಿ ಮುಳುಗಿಸಿದೆ. ಜಮೀಯ್ಯತುಲ್ ಫಲಾಹ್ ಆಜೀವ ಸದಸ್ಯರಾದ ಹರ್ಷದ್ ಸರವು, ಉಬೈದ್ ವಿಟ್ಲ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಹರ್ಷದ್ ಕುಕ್ಕಿಲ, ಹಾರಿಸ್ ಕೊಡಂಗಾಯಿ, ಅಮಾನ್ ವಿಟ್ಲ ನಿಯೋಗದಲ್ಲಿದ್ದರು.