ಆಂಧ್ರಪ್ರದೇಶ: ಆಂಧ್ರಪ್ರದೇಶದ ನಾಡಿಗಾಮಾದಲ್ಲಿ ನಾಲ್ಕು ತಿಂಗಳ ಮಗುವೊಂದು 120 ವಿಭಿನ್ನ ಬಗೆಯ ವಿಷಯಗಳನ್ನು ಗುರುತಿಸುವ ಮೂಲಕ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ನೋಂದಾಯಿಸಿದೆ.
ಆ ಪುಟ್ಟ ಮಗುವಿನ ಹೆಸರು ಕೈವಲ್ಯ. ಆಂಧ್ರಪ್ರದೇಶದ ನಾಡಿಗಾಮ ಪಟ್ಟಣದ ರಮೇಶ್ ಹಾಗೂ ಹೇಮಾ ದಂಪತಿಯ ಪುತ್ರಿಯಾದ ಈ ಪುಟ್ಟ ಮಗು 120 ವಿಭಿನ್ನ ಬಗೆಯ ಪಕ್ಷಿಗಳು, ತರಕಾರಿಗಳು, ಪ್ರಾಣಿಗಳು ಮತ್ತು ಹೂವುಗಳನ್ನು ಗುರುತಿಸುವುದರ ಮೂಲಕ “100+ ಫ್ಲ್ಯಾಷ್ ಕಾರ್ಡ್ಗಳನ್ನು ಗುರುತಿಸಿದ ವಿಶ್ವದ ಮೊದಲ ನಾಲ್ಕು ತಿಂಗಳ ಮಗು” ಎಂದು ವಿಶ್ವದಾಖಲೆಯನ್ನು ಸೃಷ್ಟಿಸಿದೆ.
ಕೈವಲ್ಯಳ ಸಾಮರ್ಥ್ಯವನ್ನು ಅವಳ ತಾಯಿ ಹೇಮಾ ಗಮನಿಸಿ, ಕುಟುಂಬದವರಿಗೆ ತಿಳಿಸಿದ್ದು ನಂತರ ಮಗುವಿನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವೀಡಿಯೊವನ್ನು ರೆಕಾರ್ಡ್ ಮಾಡಿ ನೋಬಲ್ ವರ್ಲ್ಡ್ ರೆಕಾರ್ಡ್ಸ್ ಗೆ ಕಳುಹಿಸಿ ಕೊಟ್ಟರು.
ನೋಬಲ್ ವರ್ಲ್ಡ್ ರೆಕಾರ್ಡ್ಸ್ ತಂಡವು ವೀಡಿಯೊವನ್ನು ಪರಿಶೀಲಿಸಿ, ಕೈವಲ್ಯಳ ವಿಶೇಷ ಪ್ರತಿಭೆಯನ್ನು ಗುರುತಿಸಿ ಆಕೆಯನ್ನು ವಿಶ್ವ ದಾಖಲೆಗೆ ಆಯ್ಕೆ ಮಾಡಿತು.