ಉಪ್ಪಳ: ತಲಪಾಡಿಯಿಂದ ಚೆಂಗಳ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಭರದಿಂದ ಸಾಗುತ್ತಿರುವಂತೆ ಉಪ್ಪಳ ಪೇಟೆಯಲ್ಲಿ ಫ್ಲೈ ಓವರ್ ನಿರ್ಮಾಣದ ಕೆಲಸಗಳು ಅತೀ ವೇಗದಿಂದ ಸಾಗುತ್ತಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿದೆ.
ತಿಂಗಳ ಹಿಂದೆ ಆರಂಭಿಸಿದ ಕಾಮಗಾರಿಯು ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಸುಮಾರು 16 ಪಿಲ್ಲರ್‌ಗಳ ನಿರ್ಮಾಣ ಕೆಲಸಗಳು ನಡೆಯುತ್ತಿವೆ. ಬಸ್ ನಿಲ್ದಾಣ ಬಳಿಯಿಂದ ಸುಮಾರು 200 ಮೀಟರ್ ಉದ್ದದ ಫ್ಲೈ ಓವರ್ ನಿರ್ಮಾಣಗೊಳ್ಳುವುದಾಗಿ ಎನ್ನಲಾಗುತ್ತಿದ್ದು, ಇದರ ಕಾಮಗಾರಿಯಿಂದ ಉಪ್ಪಳ ಪೇಟೆಯ ರಸ್ತೆಯು ಕಿರಿದಾಗಿ, ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಸಂಚಾರ ಸಮಸ್ಯೆಯಾಗುತ್ತಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ತಲಪಾಡಿಯಿಂದ ಕಾಸರಗೋಡು ತನಕ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳುತ್ತಿದ್ದು, ಕೆಲವು ಕಡೆಗಳಲ್ಲಿ ಬಾಕಿಯಿದೆ. ಈಗಾಗಲೇ ಪೊಸೋಟು, ಕುಕ್ಕಾರು, ಕುಂಬಳೆ ಹಾಗೂ ಎರಿಯಾಲ್ ಗಳಲ್ಲಿ ಸೇತುವೆ ಕಾಮಗಾರಿ ಪೂರ್ತಿಗೊಂಡಿದ್ದು, ಶಿರಿಯ, ಮೊಗ್ರಾಲ್ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಭೀಮ್ ಅಳವಡಿಸುವ ಕೆಲಸಗಳು ನಡೆಯುತ್ತಿವೆ.