ಉಪ್ಪಳ: ಹೈಟೆನ್ಸನ್ ವಿದ್ಯುತ್ ತಂತಿ ಮೇಲೆ ಬೃಹತ್ ಮಾವಿನ ಮರ ಭಾಗಿಕೊಂಡು ಅಪಾಯದ ಸ್ಥಿತಿಯಲ್ಲಿದ್ದು, ಈ ಬಗ್ಗೆ ಇಲಾಖೆ ಅಧಿಕಾರಿಗಳೀಗೆ ದೂರು ನೀಡಿದರೂ ತೆರವುಗೊಳಿಸಲು ಮುಂದಾಗದ್ದು, ಊರವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್ –ಕುರುಡಪದವು ರಸ್ತೆಯ ಚಿಪ್ಪಾರು ಶಾಲಾ ಬಳಿಯಲ್ಲಿ ತಂತಿ ಮೇಲೆ ಮರ ಭಾಗಿಕೊಂಡು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ. ಹಲವು ತಿಂಗಳುಗಳ ಹಿಂದೆಯೇ ಈ ಬಗ್ಗೆ ಊರವರು ವಿದ್ಯುತ್ ಇಲಾಖೆಗೆ ದೂರು ನೀಡಿದರೂ ಬಂದು ನೋಡಿ ಹೋದ ಬಳಿಕ ಮತ್ತೆ ಬರಲಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ಈ ಪರಿಸರದಲ್ಲಿ ಬಸ್ ನಿಲುಗಡೆಗೊಳ್ಳುತ್ತಿದೆ. ಶಾಲಾ ಮಕ್ಕಳ ಸಹಿತ ಹಲವು ಮಂದಿ ನಡೆದುಹೋಗುತ್ತಿದ್ದಾರೆ. ಅಲ್ಲದೆ ಕುರುಡಪದವು, ಲಾಲ್‌ಭಾಗ್, ಬೇಡಗುಡ್ಡೆ ಮೊದಲಾದ ಕಡೆಗಳಿಗೆ ಹಲವು ಬಸ್ ಸಹಿತ ವಾಹನಗಳು ಸಂಚರಿಸುತ್ತಿದೆ. ಈ ಮರ ಮುರಿದು ಬಿದ್ದಲ್ಲಿ ತಂತಿಯ ಜೊತೆ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದು ಅನಾಹುತಕ್ಕೆ ಕಾರಣವಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ, ಗಾಳಿಗೆ ಯಾವುದೇ ಕ್ಷಣದಲ್ಲಿ ಮುರಿದು ಬೀಳ ಬಹುದಾದ ಮರವನ್ನು ಕೂಡಲೇ ತೆರವುಗೊಳಿಸದಿದ್ದಲ್ಲಿ ಹೋರಾಟ ಸಮಿತಿಯನ್ನು ರಚಿಸಿ ವಿದ್ಯುತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕ್ರಮ ಕೈಗೊಳ್ಳಬೇಕಾದಿತು ಎಂದು ಊರವರು ಎಚ್ಚರಿಕೆ ನೀಡಿದ್ದಾರೆ.