ಕಿನ್ನಿಗೋಳಿ: ಕವತ್ತಾರು ದೇವಸ್ಥಾನ ಬಳಿಯ ಆಸ್ಟಿನ್ ಸಿಕ್ವೆರಾ ಅವರ ಹಟ್ಟಿಯಿಂದ ಶನಿವಾರ ಮಧ್ಯರಾತ್ರಿ ಸಣ್ಣ ಕರುವನ್ನು ಚಿರತೆಯೊಂದು ಎಳೆದೊಯ್ದು ಸಮೀಪದ ಗದ್ದೆಯಲ್ಲಿ ತಿಂದು ಅವಶೇಷವನ್ನು ತೊರೆದು ಹೋಗಿದೆ.

ಆಸ್ಟಿನ್ 11ಕ್ಕೂ ಹೆಚ್ಚು ದನಗಳನ್ನು ಸಾಕುತ್ತಿದ್ದು, ಕರುವನ್ನು ಪ್ರತ್ಯೇಕವಾಗಿ ಕಟ್ಟಿಹಾಕಿದ್ದರು. ರಾತ್ರಿ 11.30ರ ಬಳಿಕ ಮನೆಯವರು ಮಲಗಿದ ಬಳಿಕ ಚಿರತೆ ಹಟ್ಟಿಗೆ ನುಗ್ಗಿ ಕರುವನ್ನು ಎಳೆದೊಯ್ದಿದೆ. ಪರಿಸರದ ಜನರು ಭೀತರಾಗಿದ್ದು ಚಿರತೆಯನ್ನು ಕೂಡಲೇ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಬಳ್ಳುಂಜೆ ಗ್ರಾ.ಪಂ. ವ್ಯಾಪ್ತಿಯ ಕೊಲ್ಲೂರು ಪದವು, ಕವತ್ತಾರು ಗುಡ್ಡೆಯಂಗಡಿ ಪರಿಸರದಲ್ಲಿ ಹಲವು ದಿನಗಳಿಂದ ಚಿರತೆ ಕಾಟ ವಿಪರೀತವಾಗಿದ್ದು ಹಲವು ನಾಯಿಗಳು ಕಾಣೆಯಾಗಿವೆ. ನಾಯಿಯೊಂದನ್ನು ಚಿರತೆ ಒಯ್ಯುತ್ತಿರುವ ದೃಶ್ಯವೂ ಮನೆಯೊಂದರ ಸಿಸಿ ಕೆಮರಾದಲ್ಲಿ ದಾಖಲಾಗಿದೆ.




