ಬೆಂಗಳೂರು: ವ್ಯಕ್ತಿಯೊಬ್ಬ ಹಲಸಿನ ಹಣ್ಣು ಕದಿಯಲು ಬಂದು ಪೇಚಿಗೆ ಸಿಲುಕಿ ನಂತರ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ.

ತಮಿಳುನಾಡು ಮೂಲದ ಶಕ್ತಿವೇಲು(37) ಗಾಯ ಗೊಂಡವನು. ನಗರ ಪೊಲೀಸ್ ಕಚೇರಿ ಸಮೀಪದ ಅಲಿ ಅಸ್ಕರ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಲಸಿನ ಹಣ್ಣು ಕದಿಯಲು ಶಕ್ತಿವೇಲು ಸುಮಾರು 20 ಅಡಿ ಇರುವ ಎತ್ತರದ ಮರವೇರಿದ್ದಾನೆ. ಈ ವೇಳೆ ಸರಿಯಾಗಿ ಗ್ರಿಪ್ ಸಿಗದೆ ಮರದ ರೆಂಬೆ ಹಿಡಿದು ನೇತಾಡಿದ್ದಾನೆ. ಇದನ್ನು ಕಂಡ ಸ್ಥಳೀಯರು ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತ ನೇತಾಡುತ್ತಿದ್ದ ಮರದ ಕೆಳಗೆ ಟಾರ್ಪಲ್ ಮಾದರಿಯ ವಸ್ತು ಹಿಡಿದು ರಕ್ಷಿಸಲು ಯತ್ನಿಸಿದ್ದು, ಕೊನೆಗೂ ಆತ ಕೆಳಗೆ ಬಿದ್ದು ಗಾಯಗೊಂಡಿದ್ದು ಆತನನ್ನು ಆಸ್ಪತ್ರೆ ದಾಖಲಿಸಲಾಗಿದ್ದು ಆತನ ಬೆನ್ನಿಗೆ ಪೆಟ್ಟು ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.