ಬಂಟ್ವಾಳ: ಸೆ.28ರಂದು ನಡೆಯುವ ಈದ್ ಮಿಲಾದ್ ಕಾರ್ಯಕ್ರಮ ಅಂಗವಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ನೂತನ ಇನ್ಸ್ ಪೆಕ್ಟರ್ ಅನಂತಪದ್ಮನಾಭ ಅವರು ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು, ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿರುವ ವಿಚಾರ ಗಮನಕ್ಕೆ ಬಂದರೆ ನಾನು ಸುಮ್ಮನಿರುವುದಿಲ್ಲ , ಯಾವುದೇ ಕಾರ್ಯಕ್ರಮಗಳು ಕಾನೂನುಬದ್ದವಾಗಿ ಶಾಂತಿಯುತವಾಗಿ ನಡೆಯಬೇಕು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎಂದು ಸೂಚಿಸಿದ್ದಾರೆ.
ಕಾರ್ಯಕ್ರಮಗಳು ನಡೆಯುವಾಗ ಟ್ರಾಫಿಕ್ ಗೆ ಸಮಸ್ಯೆಗಳು ಆಗದಂತೆ ಕಾರ್ಯಕ್ರಮ ಸಂಯೋಜಕರು ಜಾಗೃತವಹಿಸಬೇಕು. ಸಣ್ಣ ಪುಟ್ಟ ವಿಚಾರಗಳಿಗೆ ಸಮಸ್ಯೆಗಳು ಉಂಟಾಗಬಹುದು ಎಂಬುದು ಗಮನಕ್ಕೆ ಬಂದರೆ ನೇರವಾಗಿ ಪೋಲಿಸರಿಗೆ ಮಾಹಿತಿ ನೀಡಿ. ಯಾವುದೇ ಗೊಂದಲಕ್ಕೆ ಅವಕಾಶ ನೀಡಬೇಡಿ. ಕಾನೂನನ್ನು ಕೈಗೆತ್ತಿಕೊಂಡು ಅನಾಹುತಕ್ಕೆ ಕಾರಣವಾಗಬೇಡಿ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು.
ವೈಯಕ್ತಿಕವಾಗಿ ಅಥವಾ ಸಾಮಾಜಿಕ ಸಮಸ್ಯೆಗಳಿದ್ದರೆ, ಮುಕ್ತವಾಗಿ ನನ್ನ ಬಳಿ ತಿಳಿಸಿ, ಅಂತಹ ಯಾವುದೇ ಸಮಸ್ಯೆಗಳಿದ್ದರು ಪರಿಹಾರ ಮಾಡುವಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತೇನೆ ಎಂದು ಅವರು ತಿಳಿಸಿದರು.
ಟ್ರಾಫಿಕ್ ಸಮಸ್ಯೆಗಳಿಗೆ ಪೋಲೀಸ್ ಕಡೆಯಿಂದ ಯಾವ ಕ್ರಮಗಳು ಆಗಬೇಕು ಅದನ್ನು ಇಲಾಖೆಯಿಂದ ಖಂಡಿತ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಠಾಣಾ ಎಸ್.ಐ.ರಾಮಕೃಷ್ಣ, ಅಪರಾಧ ವಿಭಾಗದ ಎಸ್.ಐ ಕಲೈಮಾರ್, ಟ್ರಾಫಿಕ್ ಎಸ್.ಐ ಸುತೇಶ್ ಉಪಸ್ಥಿತರಿದ್ದರು.