ಪಾರ್ಕಿಂಗ್ ಸಿಬ್ಬಂದಿ ಕಾರನ್ನು ರಿವರ್ಸ್ ತೆಗೆಯುವ ವೇಳೆ ಪಾದಾಚಾರಿಗೆ ಡಿಕ್ಕಿ; ವ್ಯಕ್ತಿ ಸಾವು

Share with

ಬೆಂಗಳೂರು: ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಪಾರ್ಕಿಂಗ್ ಸಿಬ್ಬಂದಿ ರಿವರ್ಸ್ ತೆಗೆಯುವಾಗ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಂಕದಕಟ್ಟೆಯ ಸಿದ್ದಾರ್ಥನಗರ ಬಡಾವಣೆಯ ನಿವಾಸಿ ಸ್ವಾಮಿದೊರೆ (50) ಮೃತ ದುರ್ದೈವಿ. ಈ ಸಂಬಂಧ ಮೃತರ ಪತ್ನಿ ನೀಡಿದ ದೂರಿನನ್ವಯ ಬಾಲ ಸುಬ್ರಮಣ್ಯಂ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ತಮಿಳುನಾಡು ಮೂಲದ ಸ್ವಾಮಿದೊರೆ ದಂಪತಿ ಕಾರ್ಯ ನಿಮಿತ್ತ ತಮಿಳುನಾಡಿಗೆ ಹೋಗಿದ್ದು, ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಬಸ್‌ ಇಳಿದು ನಡೆದುಕೊಂಡು ಬಿಎಂಟಿಸಿ ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದರು. ಅದೇ ವೇಳೆ ಪ್ರಯಾಣಿಕರೊಬ್ಬರು ಪಾರ್ಕ್ ಮಾಡಿ ಹೋಗಿದ್ದ ಕಾರನ್ನು ಪಾರ್ಕಿಂಗ್ ಸಿಬ್ಬಂದಿ ಸುಬ್ರಮಣ್ಯಂ ರಿವರ್ಸ್ ತೆಗೆಯುವಾಗ ವೇಗವಾಗಿ ಬಂದು ಸ್ವಾಮಿದೊರೆಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದ ವೇಳೆ ಆರೋಪಿ ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಕಣ್ಣ ಮುಂದೆಯೇ ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಠಾಣೆ ಬಳಿ ಆಗಮಿಸಿದ ಪತ್ನಿ ನನ್ನ ಕಣ್ಣೆದುರೆ ಗಂಡನ ಪ್ರಾಣ ಹೋಯ್ತು ಎಂದು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.


Share with

Leave a Reply

Your email address will not be published. Required fields are marked *