ಉಪ್ಪಳ: ನಳ್ಳಿ ನೀರು ಒಂದು ವಾರದಿಂದ ವಿತರಣೆ ಮೊಟಕುಗೊಂಡಿದ್ದು, ಆದರೆ ಪೈಪ್ ಲೈನ್ ಬಿರುಕು ಬಿಟ್ಟು ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವ ಘಟನೆ ಸೋಂಕಾಲಿನಲ್ಲಿ ನಡೆದಿದ್ದು, ಇದು ನಾಗರಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸೋಂಕಾಲು ಸಮೀಪದ ಕಿರು ಸಂಕದ ಪರಿಸರದಲ್ಲಿ ಪೈಪ್ ಬಿರುಕುಬಿಟ್ಟು ನೀರು ಪೋಲಾಗಿ ಮಳೆ ನೀರು ರೀತಿಯಲ್ಲಿ ಚರಂಡಿ ಸೇರುತ್ತಿರುವ ದೃಶ್ಯ ನಿನ್ನೆ ಸಂಜೆ ಈ ಪರಿಸರದಿಂದ ಹಾದುಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನ ಗಮನಕ್ಕೆ ಬಂದಿದೆ.
ಇದು ಈ ಹಿಂದಿನಿಂದಲೂ ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೆ ಬೇಕೂರು ಕುಡಿನೀರು ಯೋಜನೆಯ ಟ್ಯಾಂಕ್‌ನಿಂದ ವಿತರಣೆಗೊಳ್ಳುವ ನೀರು ಪೋಲಾಗುತ್ತಿದೆ. ಕಳೆದ ಒಂದು ವಾರದಿಂದ ನಳ್ಳಿ ನೀರು ಬಾರದೆ ಪರದಾಡುವಂತ ಪರಿಸ್ಥಿತಿ ಉಂಟಾಗಿರುವುದಾಗಿ ಪ್ರತಾಪನಗರ ಹಾಗೂ ಪರಿಸರ ನಿವಾಸಿಗಳು ತಿಳೀಸಿದ್ದಾರೆ.
ವಿವಿಧ ಕಡೇಗಳಲ್ಲಿ ಪದೇ ಪದೇ ಪೈಪ್ ಬಿರುಕು ಬಿಟ್ಟು ನೀರು ಪೋಲಾಗುತ್ತಿದ್ದರೂ ದುರಸ್ಥಿಗೆ ಕ್ರಮಕೈಗೊಳ್ಳದಿರುವುದು ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ ಸಾರ್ವಜನಿಕರು ಆರೋಪಿಸಿದ್ದಾರೆ.