ಪೆರ್ಲ: ಎಣ್ಮಕಜೆ ಗ್ರಾಪಂನಲ್ಲಿ 36 ಮನೆಗಳು ಸಾಯಿ ಟ್ರಸ್ಟ್ ಮತ್ತು 7 ಮನೆಗಳು ಜೋಯ್ ಅಲೂಕಾಸ್ ಸಹಯೋಗದಲ್ಲಿ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಮನೆಗಳ ಹಸ್ತಾಂತರ ಪ್ರಕ್ರಿಯೆ ಮತ್ತು ಉದ್ಘಾಟನೆ ನಡೆದಿಲ್ಲ.6 ವರ್ಷಗಳ ಮೊದಲು ಆರಂಭವಾದ ಈ ಯೋಜನೆ 2020ರಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.ಮನೆಗಳನ್ನು ಶೀಘ್ರವಾಗಿ ಹಸ್ತಾಂತರಿಸಿ ಉದ್ಘಾಟನೆ ನಡೆಸುವಂತೆ ಆಗ್ರಹಿಸಿ ಎಣ್ಮಕಜೆ ಮಂಡಲ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಎಂಡೋಸಲ್ಫಾನ್ ಸಂತ್ರಸ್ತರ ಲಿಸ್ಟ್ ನಲ್ಲಿರುವವರಿಗೆ ಮಾತ್ರ ಹಕ್ಕು ಪತ್ರ ಕೊಡುವ ಯೋಜನೆ ಜಿಲ್ಲಾಧಿಕಾರಿ ಅಧ್ಯಕ್ಷರಾದ ಸಮಿತಿಯಲ್ಲಿ ಹಕ್ಕು ಪತ್ರ ಕೊಡುವ ಪ್ರಕ್ರಿಯೆ ಪೂರ್ಣಗೊಂಡಿದೆ.ಮನೆಗಳಿಗೆ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ, ಮಾರ್ಗದ ಡಾಮರೀಕರಣ ಪೂರ್ಣಗೊಂಡಿದ್ದರೂ ಉದ್ಘಾಟನೆ ವಿಳಂಬವಾಗಿದೆ.
ಕಳೆದ ವರ್ಷ ಎಣ್ಮಕಜೆ ಗ್ರಾಪಂ ಆಡಳಿತ ಸಮಿತಿ ಅಂದಿನ ಜಿಲ್ಲಾಧಿಕಾರರಿಯ ತೀರ್ಮಾನದಂತೆ ಪಂಚಾಯಿತಿ ಜನಪ್ರತಿನಿಧಿಗಳು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು, ಆರೋಗ್ಯ ಇಲಾಖೆ, ಕುಟುಂಬಶ್ರೀ, ಸಾರ್ವಜನಿಕರು ಸಹಿತ ಸುಮಾರು 1,000 ಮಂದಿ ಶ್ರಮದಾನದ ಮೂಲಕ ಸಾಯಿ ಗ್ರಾಮದ ಮನೆಗಳ ಪರಿಸರವನ್ನು ಶುಚಿತ್ವಗೊಳಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳನ್ನು ಸಾಂತ್ವನಗೊಳಿಸುವ ನಿಟ್ಟಿನಲ್ಲಿ ಕೂಡಲೆ ಉದ್ಘಾಟನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.ಎಣ್ಮಕಜೆ ಕಾಂಗ್ರೆಸ್ ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರಾದ ವಿಲ್ ಫ್ರೆಡ್ ಡಿ’ಸೋಜಾ, ಮಾಯಿಲ ನಾಯ್ಕ, ನಾರಾಯಣ ನಾಯ್ಕ ಮನವಿ ಸಲ್ಲಿಸಿದ್ದಾರೆ.