ಉಡುಪಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೋಮೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದ ಕಾರ್ಮಿಕನ ಮೇಲೆ ಟಿಪ್ಪರ್ ಹರಿದು ಆತ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ.
ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದ ಲಾರಿ ಕಾರ್ಮಿಕ ಶಿವರಾಜ್ ಎಂಬುವವರ ಮೇಲೆ ಟಿಪ್ಪರ್ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟಿಪ್ಪರ್ ಚಾಲಕ ಪೆಟ್ರೋಲ್ ಹಾಕಿಕೊಂಡು ಹೋಗುವಾಗ ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದ ಕಾರ್ಮಿಕನ ಮೇಲೆಯೇ ಚಾಲಕ ಟಿಪ್ಪರ್ ಹರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿವಮೊಗ್ಗ ಮೂಲದ ಕಾರ್ಮಿಕ ಶಿವರಾಜ್ ನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದನು.
ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದು ನಿದ್ರೆಗೆ ಜಾರಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.