ಪುತ್ತೂರು: ಕಾಡಿನಲ್ಲಿ ಸಿಕ್ಕಿದ ಹಣ್ಣನ್ನು ತಂದು ಜ್ಯೂಸ್ ಮಾಡಿ ಕುಡಿದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಶೇಣಿ ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ(35) ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು ಜ್ಯೂಸ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು.
ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಲೀಲಾವತಿಯವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಸೌಖ್ಯ ತೀವ್ರಗೊಂಡು ಅ.2 ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡುಯ್ಯುವಾಗ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.