ಬೆಕ್ಕು ಕಚ್ಚಿ ಶಿವಮೊಗ್ಗದ ಮಹಿಳೆ ಸಾವು

Share with

ಮನೆಯಲ್ಲಿ ಸಾಕಿದ ಬೆಕ್ಕೊಂದು ಮನೆಯ ಮಹಿಳೆಯನ್ನು ಬಲಿ ಪಡೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ.

ಗಂಗೀಬಾಯಿ (50) ಮನೆಯ ಸಾಕು ಬೆಕ್ಕು ಕಚ್ಚಿ ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ.

ತರಲಘಟ್ಟದ ಗಂಗಿಬಾಯಿ ಅವರಿಗೆ ಎರಡು ತಿಂಗಳ ಹಿಂದೆ ಸಾಕು ಬೆಕ್ಕು ಕಚ್ಚಿತ್ತು ಎನ್ನಲಾಗಿದೆ. ಈ ಹಿಂದೆ ತರಲಘಟ್ಟದ ಶಿಬಿರವೊಂದರಲ್ಲಿ ಈ ಬೆಕ್ಕು ಯುವಕನ ಮೇಲೆ ದಾಳಿ ಮಾಡಿತ್ತು. ನಂತರ ಮಹಿಳೆ ಮೇಲೂ ಹಲ್ಲೆ ನಡೆಸಿ ಕಚ್ಚಿರುವುದು ತಿಳಿದು ಬಂದಿದೆ.

ಬೆಕ್ಕು ಕಚ್ಚಿದ ಪರಿಣಾಮ ಗಂಗೀಬಾಯಿ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಳು. ಬೆಕ್ಕು ಕಚ್ಚಿದ ಬಳಿಕ ಮಹಿಳೆ ಐದು ಚುಚ್ಚುಮದ್ದು ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಆರೋಗ್ಯವಾಗಿದ್ದೇನೆ ಎಂದುಕೊಂಡ ಗಂಗೀಬಾಯಿ ಉಳಿದ ನಾಲ್ಕು ಚುಚ್ಚುಮದ್ದು ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ.

ಮೊದಲ ಇಂಜೆಕ್ಷನ್ ಪಡೆದ ಬಳಿಕ ಗಂಗೀಬಾಯಿ ಆರೋಗ್ಯ ಚೇತರಿಸಿಕೊಂಡಿದ್ದು, ಹುಷಾರಾದ ಬಳಿಕ ಗದ್ದೆಗೆ ನಾಟಿ ಮಾಡಲು ಹೋಗಿದ್ದಾರೆ. ನೀರು ಹಾಗೂ ಕೆಸರಿಗೆ ಇಳಿದ ಕಾರಣ ಬೆಕ್ಕು ಕಚ್ಚಿದ ಗಾಯ ಇನ್ನಷ್ಟು ಉಲ್ಬಣಗೊಂಡಿದೆ. ಜೊತೆಗೆ ರೇಬಿಸ್ ಕಾಯಿಲೆಯ ಲಕ್ಷಣಗಳು ಕೂಡ ಹೆಚ್ಚಾಗಿದ್ದು, ತೀವ್ರ ಅನಾರೋಗ್ಯ ಕಾಡಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಅಧಿಕಾರಿಗಳು ನಾಯಿ ಕಡಿತದಿಂದ ಮಾತ್ರವಲ್ಲದೆ ಬೆಕ್ಕು ಕಡಿತದಿಂದಲೂ ರೇಬಿಸ್ ಹರಡುತ್ತದೆ ಎಂದು ತರಲಘಟ್ಟದ ಜನರಿಗೆ ಹೇಳಿದರು. ಅಲ್ಲದೆ ಸಾಕು ಪ್ರಾಣಿಗಳು ಕಚ್ಚಿದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ತಿಳಿಸಲಾಗಿದೆ.


Share with