ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮೊಹಮ್ಮದ್ ಅಸ್ಕರ್‌ನಿಗೆ ನೀಡುವ ಉದ್ದೇಶದಿಂದ ಮಹಿಳೆಯೊಬ್ಬಳು ಎಂಡಿಎಂಎ ರೀತಿಯ ಅನುಮಾನಾಸ್ಪದ ಪುಡಿಯನ್ನು ತಂದಿದ್ದು, ಜೈಲು ಸಿಬಂದಿ ಪರಿಶೀಲನೆ ವೇಳೆ ಇದು ಪತ್ತೆಯಾಗಿದೆ. ಜೈಲಿನ ಅಧೀಕ್ಷಕರ ದೂರಿನಂತೆ ಬರ್ಕೆ ಠಾಣೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಜು.10ರಂದು ಮಧ್ಯಾಹ್ನ 12.15ಕ್ಕೆ ಸಂದರ್ಶಕಿಯಾಗಿ ರಮ್‌ಸೂನಾ ಎಂಬಾಕೆ ಬಂದಿದ್ದು, ಆಕೆ ಅಸ್ಕರ್‌ಗೆ ನೀಡಲು ಬೇಕರಿ ತಿಂಡಿಗಳಾದ 2 ಪ್ಯಾಕೆಟ್ ಚಕ್ಕುಲಿ, 1 ಪ್ಯಾಕೆಟ್ ಚಿಪ್ಸ್, 1 ಪ್ಯಾಕೆಟ್ ಮಿಕ್ಸ್‌ಚರ್ ಹಾಗೂ 1 ಪ್ಯಾಕೆಟ್ ನಿಪ್ಪಟ್ಟು ತಂದಿದ್ದಾಳೆ. ಕರ್ತವ್ಯದಲ್ಲಿದ್ದ ಸಿಬಂದಿ ಬೇಕರಿ ತಿಂಡಿಗಳನ್ನು ಪರಿಶೀಲಿಸಿದಾಗ ಚಕ್ಕುಲಿ ಪಾಕೆಟ್‌ನಲ್ಲಿ ತಲಾ ಒಂದೊಂದು, ಚಿಪ್ಸ್ ಪ್ಯಾಕೆಟ್‌ನಲ್ಲಿ ಒಂದು ಮತ್ತು ಮಿಕ್ಸ್‌ಚರ್ ಪ್ಯಾಕೆಟ್‌ನಲ್ಲಿ 2 ಹೀಗೆ ಅಲ್ಯುಮೀನಿಯಂ ಫಾಯಿಲ್‌ನಲ್ಲಿ ಸುತ್ತಿದ್ದ 5 ಸಣ್ಣ ಪೊಟ್ಟಣಗಳು ಪತ್ತೆಯಾಗಿದೆ. ತೆರೆದು ನೋಡಿದಾಗ ಬಿಳಿ ಬಣ್ಣದ ಎಂಡಿಎಂಎ ನಂತಹ ಅನುಮಾನಾಸ್ಪದ ಪುಡಿ ಕಂಡು ಬಂದಿದೆ.
ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ ಹೊಸಂಗಡಿಯ ಹುಸೇನ್ ಎಂಬಾತ ಕೆಲವು ಪೊಟ್ಟಣಗಳನ್ನು ಕೊಡುತ್ತಾನೆ ಅದನ್ನು ತಂದು ಕೊಡಬೇಕು ಎಂದು ಅಸ್ಕರ್ ಈ ಹಿಂದೆ ತಿಳಿಸಿದ್ದ, ಅದರಂತೆ ತಂದಿರುವುದಾಗಿ ತಿಳಿಸಿದ್ದಾಳೆ. ಈ ಬಗ್ಗೆ ಜೈಲು ಅಧೀಕ್ಷಕ ಶರಣ ಬಸಪ್ಪ ಅವರು ಬರ್ಕೆ ಠಾಣೆಗೆ ದೂರು ನೀಡಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.