ಪುತ್ತೂರು: ನಗರದ ಚಿನ್ನಾಭರಣಗಳ ಮಳಿಗೆಯೊಂದರಿಂದ ಮಹಿಳೆಯೊಬ್ಬರು ಗಿರಾಕಿಯಂತೆ ಬಂದು ಚಿನ್ನದ ಚೈನೊಂದನ್ನು ಎಗರಿಸಿ ಪರಾರಿಯಾದ ಘಟನೆ ಆ.7ರಂದು ನಡೆದಿದೆ.
ಆ.7ರಂದು ಸುಮಾರು 12 ಗಂಟೆ ವೇಳೆ ನಗರದ ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ಗೆ ಬುರ್ಕಾ ಧರಿಸಿ ಸಣ್ಣ ಮಗುವಿನೊಂದಿಗೆ ಬಂದ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದಾರೆ. ಗಿರಾಕಿಯಂತೆ ಬಂದ ಮಹಿಳೆ 8 ಗ್ರಾಂ, 4ಗ್ರಾಂ ನ ಚೈನು(ಸರ) ಬೇಕೆಂದು ಬೇರೆ ಬೇರೆ ಡಿಸೈನ್ ನ ಸರಗಳನ್ನು ನೋಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆ ಮಗುವಿಗೆ ಎದೆ ಹಾಲು ಕೊಡಲು ಶುರು ಮಾಡಿದೆ. ಈ ವೇಳೆ ಕೌಂಟರ್ ನಲ್ಲಿದ್ದ ಇಬ್ಬರು ಸೇಲ್ಸ್ ಹುಡುಗರ ಪೈಕಿ ಓರ್ವ ಈಚೆ ಬಂದಿದ್ದು, ಮತ್ತೋರ್ವ ಅಲ್ಲಿಯೇ ನಿಂತಿದ್ದ. ಬುರ್ಕಾದೊಳಗಡೆ ಮಗುವಿಗೆ ಹಾಲುಣಿಸುತ್ತಿದ್ದ ಮಹಿಳೆ ಬ್ರಾಸ್ಲೆಟ್ ತೋರಿಸುವಂತೆ ಕೌಂಟರ್ ನಲ್ಲಿದ್ದ ಹುಡುಗನನ್ನು ಕೇಳಿದ್ದಾಳೆ.
ಸೇಲ್ಸ್ ಮ್ಯಾನ್ ಹುಡುಗ ಶೋಕೇಸ್ ನಿಂದ ಬ್ರಾಸ್ಲೆಟ್ ತೆಗೆಯಲು ತಿರುಗುವ ವೇಳೆ ಕೌಂಟರ್ ಶೋಕೇಸ್ ನ ಮೇಲೆ ಇಟ್ಟಿದ್ದ ಚೈನುಗಳ ಟ್ರೇಯಿಂದ ಒಂದು ಚೈನನ್ನು ಮಹಿಳೆ ಎಗರಿಸಿದ್ದು, ಬ್ಲೌಸ್ ಒಳಗಡೆ ಹಾಕಿ ಅಲ್ಲಿಂದ ತಕ್ಷಣ ಜಾಗ ಖಾಲಿ ಮಾಡಿದ್ದಾಳೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚೈನ್ ಕಳವಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ನಗರದಲ್ಲಿ ಮಹಿಳೆಗಾಗಿ ಹುಡುಕಾಟ ನಡೆಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ನಗರದ ಇತರೆಡೆಗಳಲ್ಲಿ ಇರುವ ಸಿಸಿಟಿವಿಯಲ್ಲಿ ಮಗುವನ್ನು ಎತ್ತಿಕೊಂಡು ಹೋಗುವ ಮಹಿಳೆಯ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಲು ಜ್ಯುವೆಲ್ಲರಿ ಶಾಪ್ ಮಾಲೀಕರು ಮುಂದಾಗಿದ್ದಾರೆ.