
ಟ್ರಿಪ್ ಎಂದರೆ ಯಾರಿಗೇ ತಾನೇ ಇಷ್ಟ ಹೇಳಿ, ಕೆಲವರು ಸೋಲೋ ಟ್ರಿಪ್ (Trip) ಪ್ಲ್ಯಾನ್ ಮಾಡಿಕೊಂಡ್ರೆ, ಇನ್ನು ಕೆಲವರು ಫ್ಯಾಮಿಲಿ ಸ್ನೇಹಿತರ ಜೊತೆಗೆ ಸುತ್ತಾಡಲು ಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವಕನು ತನ್ನ ಪ್ರೀತಿಯ ಶ್ವಾನದೊಂದಿಗೆ ಸೈಕಲ್ನಲ್ಲಿ ಭಾರತವನ್ನು (India) ಸುತ್ತುವ ಮೂಲಕ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾನೆ. ಈ ಬಿಹಾರದ ಯುವಕನ ಹೆಸರು ಸೋನು (Sonu). ಇಲ್ಲಿಯವರೆಗೆ ಸರಿಸುಮಾರು 12,000 ಕಿಮೀಗೂ ಹೆಚ್ಚು ಸೈಕಲ್ ತುಳಿದುಕೊಂಡೇ ಸುತ್ತಾಟ ನಡೆಸಿದ್ದಾನೆ. ತನ್ನ ಚಾರ್ಲಿಯೊಂದಿಗೆ ಈತನ ಸುತ್ತಾಟದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
safarmeinrahi ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಈ ಯುವಕನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದು ಈ ವೇಳೆಯಲ್ಲಿ ತನ್ನ ಚಾರ್ಲಿಯೊಂದಿಗೆ ಸೈಕಲ್ನಲ್ಲಿ ಭಾರತ ಸುತ್ತುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈ ವಿಡಿಯೋದ ಪ್ರಾರಂಭದಲ್ಲಿ ನನ್ನ ಹೆಸರು ಸೋನು, ನಾನು ಬಿಹಾರದವನು, ನಾನು ಇಲ್ಲಿಯವರೆಗೆ 12000 ಕಿಮೀಗೂ ಹೆಚ್ಚು ಸೈಕಲ್ನಲ್ಲಿಯೇ ಸವಾರಿ ಮಾಡಿದ್ದೇನೆ. ಕಳೆದ 11 ತಿಂಗಳಿನಿಂದ ಮನೆಯಿಂದ ಸಂಪೂರ್ಣವಾಗಿ ದೂರವಿದ್ದೇನೆ. ನನ್ನ ಈ ಪ್ರಯಾಣದಲ್ಲಿ ಜೊತೆಯಾಗಿರುವುದು ನನ್ನ ಚಾರ್ಲಿ. ಅವನು ಎಂದಿಗೂ ನನ್ನನ್ನು ಬಿಡುವುದಿಲ್ಲ. ನಾನು ಸೈಕಲ್ನಲ್ಲಿ ಹೊರಟು ನಿಂತಾಗ ನನ್ನನ್ನು ಹಿಂಬಾಲಿಸುತ್ತಾನೆ ಎಂದಿದ್ದಾನೆ.




