ಕುಂದಾಪುರ: ಕುಂದಾಪುರದ ಯುವಕರೊಬ್ಬರು ಉಡುಪಿಯಿಂದ ಲಡಾಖ್ ವರೆಗೆ ಸೈಕಲ್‌ನಲ್ಲಿ ಪ್ರಯಾಣಿಸಿ ಸಾಧನೆ ಮಾಡಿದ್ದಾರೆ. ಪರಿಸರ ಉಳಿಸಿ ಎಂಬ ಸಂದೇಶದೊಂದಿಗೆ 11 ತಿಂಗಳು ಪ್ರಯಾಣಿಸಿದ ಅವರು 3,000 ಕಿ.ಮೀ. ಕ್ರಮಿಸಿದ್ದಾರೆ. ಅವರಿಗೆ ಒಂದು ಪುಟಾಣಿ ನಾಯಿಮರಿ ಕೂಡ ಸಾಥ್ ನೀಡಿದೆ. ಕೆರಾಡಿ ಗ್ರಾಮದ ಪಾರ್ವತಿ ಮತ್ತು ಶೇಷು ಬೋವಿ ದಂಪತಿಯ ಪುತ್ರನಾದ ದಿನೇಶ್ ಬೋವಿ ಅವರೇ ಈ ಸಾಧನೆ ಮಾಡಿದ ಯುವಕ. 23 ವರ್ಷ ಪ್ರಾಯದ ಇವರು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

8 ರಾಜ್ಯಗಳಿಗೆ ಭೇಟಿ
ಉಡುಪಿಯಿಂದ ದಿನೇಶ್ ಅವರು ಕಳೆದ ವರ್ಷದ ಅ. 15ರಂದು ಹೊರಟಿದ್ದು, ಸೈಕಲ್‌ನಲ್ಲಿ ಲಡಾಖ್‌ಗೆ ತಲುಪಲು 330 ದಿನಗಳು ತಗಲಿವೆ. ಈ ಸೈಕಲ್‌ನಲ್ಲಿ ಅವರು 8 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಕರ್ನಾಟಕ ದಿಂದ ಆರಂಭಗೊಂಡು, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ ಮೂಲಕವಾಗಿ ಜಮ್ಮು ಕಾಶ್ಮೀರ ತಲುಪಿದ್ದಾರೆ. 11 ತಿಂಗಳಿಗಿಂತ ಬೇಗ ತಲುಪ ಬಹುದಾಗಿದ್ದರೂ, ಕಾಶ್ಮೀರದ ಥಾಂಗ್ ಗ್ರಾಮದ ರಸ್ತೆ ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿದ್ದು, ಅದಕ್ಕಾಗಿ 1 ತಿಂಗಳು ಮುಂಬಯಿಯಲ್ಲಿ ವಿಶ್ರಾಂತಿ ಮಾಡಿದ್ದರೆ, 3 ತಿಂಗಳು ಗುಜರಾತಿನಲ್ಲಿ ತಂಗಿದ್ದರು. ಥಾಂಗ್ ಗಡಿ ಗ್ರಾಮವಾಗಿದ್ದು, ಆಚೆ ಪಾಕಿಸ್ಥಾನ ಭೂಪ್ರದೇಶ ಕಾಣಿಸುತ್ತದೆ.

ನಾಯಿಮರಿ ಜತೆಯಾಗಿದ್ದೆಲ್ಲಿ?
ದಿನೇಶ್ ಅವರು ಸೈಕಲ್ ಪಯಣದ ವೇಳೆ ಕಾರವಾರದಲ್ಲಿ ತಂಗಿದ್ದಾಗ ಬೀದಿ ಬದಿಯಲ್ಲಿದ್ದ ಹೆಣ್ಣು ನಾಯಿ ಮರಿಯೊಂದು ಇವರಿಗೆ ಸಿಕ್ಕಿದ್ದು, ಅದು ಕೂಡ ಇವರೊಂದಿಗೆ ಲಡಾಕ್‌ಗೆ ಸೈಕಲ್‌ನಲ್ಲಿಯೇ ಪಯಣ ಬೆಳೆಸಿದೆ. ಅದು ಸಹ 326 ದಿನಗಳ ಕಾಲ ಸಂಚಾರ ಮುಗಿಸಿದೆ. ಅಲ್ಲಿಂದ ಆ ನಾಯಿ ಮರಿಯೊಂದಿಗೆ ದಿನೇಶ್ ಅವರು ಊರಿಗೆ ವಾಪಾಸಾಗುತ್ತಿದ್ದಾರೆ.
1 ಲಕ್ಷ ರೂ. ಖರ್ಚು
ಈ 11 ತಿಂಗಳ ಪ್ರಯಾಣದಲ್ಲಿ ಆಹಾರಕ್ಕೆ ಮಾತ್ರ ಹೆಚ್ಚಿನ ಖರ್ಚಾಗಿದ್ದು, ಒಟ್ಟಾರೆ ಸುಮಾರು 1 ಲಕ್ಷ ರೂ. ನಷ್ಟು ಖರ್ಚಾಗಿದೆ. ಟೆಂಟ್ ಹಾಕಿ ಮಲಗಿದ್ದಲ್ಲದೆ, ಕೆಲವೆಡೆ ಬಸ್ ನಿಲ್ದಾಣ, ಗುಡಿಗಳು, ಸಣ್ಣ ಸಣ್ಣ ಹೋಟೆಲ್ ಗಳಲ್ಲಿ ಮಾತ್ರ ಉಳಿದುಕೊಳ್ಳುತ್ತಿದ್ದರು. ಈ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ | ವಿನ್ಸೆಂಟ್ ಆಳ್ವ ಅವರೇ ಭರಿಸಿದ್ದಾರೆ. ಸ್ವತಃ ಸೈಕಲಿಸ್ಟ್ ಆಗಿರುವ ಅವರು ಸೈಕಲ್ ಸಹ ಕೊಡುಗೆಯಾಗಿ ನೀಡಿ, ತನ್ನ ವಿದ್ಯಾರ್ಥಿಗೆ ಪ್ರೋತ್ಸಾಹಿಸಿದ್ದಾರೆ.
ಖುಷಿ ಕೊಟ್ಟ ಸೈಕಲ್ ಪ್ರಯಾಣ
ರಸ್ತೆಯಲ್ಲಿ ಸಿಕ್ಕವರಿಗೆ ಪರಿಸರ ಉಳಿಸಿ ಅನ್ನುವ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದೆ. 11 ತಿಂಗಳ ಬಳಿಕ ಪೂರ್ಣಗೊಂಡಿದೆ. ಆರಂಭಿಸುವಾಗ ತುಂಬಾ ಭಯ ಇತ್ತು. ಈಗ ಖುಷಿಯಾಗಿದೆ. ಈ ಹಿಂದೆ ಉಡುಪಿಯಿಂದ ಧರ್ಮಸ್ಥಳ ಕಾಲ್ನಡಿಗೆ ಮಾಡಿದ್ದೆ. ಅದಾದ ಬಳಿಕ ಉಡುಪಿಯಿಂದ ಕನ್ಯಾಕುಮಾರಿಗೆ 1,500 ಕಿ.ಮೀ. ದೂರವನ್ನು (21 ದಿನಗಳ ಕಾಲ) ಸೈಕಲ್‌ನಲ್ಲಿ ಕ್ರಮಿಸಿದ್ದೆ. ಮನೆಯವರು, ಕಾಲೇಜಿನವರ ಸಹಕಾರದಿಂದ ಇದು ಸಾಧ್ಯವಾಯಿತು – ದಿನೇಶ್ ಬೋವಿ ಕೆರಾಡಿ, ಸೈಕಲ್ ಸವಾರ




