ಉಳ್ಳಾಲ: ಮಂಗಳೂರು ಮೂಲದ ಯುವತಿಯೊಬ್ಬಳು ದುಬೈಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟ ಯುವತಿಯನ್ನು ಉಳ್ಳಾಲದ ಕೋಟೆಕಾರು ಬೀರಿ ಕೆಂಪಮಣ್ಣು ನಿವಾಸಿ ವಿದಿಶಾ(28) ಎಂದು ಗುರುತಿಸಲಾಗಿದೆ. ವಿದಿಶಾ ಅವರು ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯೆಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಮಗಳಾಗಿದ್ದಾರೆ.
ಅವರು ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೊತ್ತರ ಪದವಿ ಪಡೆದು, ಬಳಿಕ ಒಂದು ವರ್ಷ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದು, 2019ರಲ್ಲಿ ದುಬೈಗೆ ತೆರಳಿ ಕಂಪೆನಿಯೊಂದರಲ್ಲಿ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಪ್ರತೀ ದಿನ ಕಂಪೆನಿಯ ಕ್ಯಾಬ್ನಲ್ಲಿ ಸಂಚರಿಸುತ್ತಿದ್ದ ವಿದಿಶಾ ಅವರು ಫೆ.22ರಂದು ತಡವಾಯಿತು ಎಂದು ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.