ಬಂಟ್ವಾಳ: ಕಣ್ಣೂರು-ಬೆಂಗಳೂರು- ಮಂಗಳೂರು ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ ಸಿ ರೋಡು ಸಮೀಪದ ಕೈಕುಂಜೆ ಎಂಬಲ್ಲಿ ಇಂದು(ಫೆ.15) ಮುಂಜಾನೆ ವೇಳೆ ಸಂಭವಿಸಿದೆ.
ಮೃತ ಯುವತಿಯನ್ನು ತುಮಕೂರು ಮೂಲದ ನಯನ (25) ಎಂದು ಪೊಲೀಸರು ಗುರುತಿಸಿದ್ದಾರೆ.
ಮುಂಜಾನೆ ಸುಮಾರು 6.25 ರ ವೇಳೆಗೆ ಸಂಚರಿಸುತ್ತಿದ್ದ ರೈಲಿನಿಂದ ಯುವತಿ ನದಿ ನೀರಿಗೆ ಜಿಗಿದಿದ್ದಾಳೆ ಎನ್ನಲಾಗಿದೆ. ರೈಲಿನ ಇತರ ಪ್ರಯಾಣಿಕರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಘಟನೆಯನ್ನು ಖಚಿತ ಪಡಿಸಿಕೊಂಡಿದ್ದಾರೆ.
ಮಹಿಳೆಯ ಆಧಾರ್ ಕಾರ್ಡ್ ನಲ್ಲಿ ಕೇರ್/ಆಫ್ ಎಮ್. ಗೋವಿಂದರಾಜು ಪಡಸಾಲೆಹಟ್ಟಿ, ಮಿಡಿಗೇಶಿ, ಮಧುಗಿರಿ ತಾಲೂಕು ತುಮಕೂರು ಜಿಲ್ಲೆ ಹೊಸಕರೆ ಎಂಬ ವಿಳಾಸವಿದೆ. ನಯನ ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿದ್ದು, ಬಿಸಿರೋಡಿನ ನೇತ್ರಾವತಿ ನದಿಯ ರೈಲ್ವೇ ಓವರ್ ಬ್ರಿಡ್ಜ್ ನಲ್ಲಿ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಕ್ಷಣ ನದಿಯಲ್ಲಿ ದೋಣಿ ಮೂಲಕ ಕಾರ್ಯಾಚರಣೆ ನಡೆಸಿದ ಗೂಡಿನಬಳಿ ನಿವಾಸಿ ಮುಹಮ್ಮದ್ ಮಮ್ಮು ನೇತೃತ್ವದ ಜೀವ ರಕ್ಷಕ ತಂಡದ ಯುವಕರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ರೈಲ್ವೆ ಪ್ರಯಾಣಿಕರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯುವತಿಯ ಸಂಬಂಧಿಕರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.