ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.
ಪುತ್ತೂರು ನೆಹರೂ ನಗರದ ದಿವಂಗತ ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯ(29) ಜ.24ರಂದು ಲಿವರ್ ವೈಫಲ್ಯದಿಂದ ಮೃತಪಟ್ಟಿದ್ದಾರೆ.
ಐಶ್ವರ್ಯ ಅವರು ಜಾಂಡೀಸ್‌ನಿಂದ ಬಳಲುತ್ತಿದ್ದರು. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಐಶ್ವರ್ಯಾಗೆ ಲಿವರ್ ಡ್ಯಾಮೇಜ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ ಯಕೃತ್ತಿನ ಕಸಿ ಅಗತ್ಯ ಎಂದು ವೈದ್ಯರು ನಿರ್ಧರಿಸಿದರು.
ಐಶ್ವರ್ಯಾ ಅವರ ತಾಯಿ ಲಿವರ್ ದಾನ ಮಾಡಲು ಸಿದ್ಧರಿದ್ದರು, ಆದರೆ ಐಶ್ವರ್ಯಾ ಅವರ ತಂಗಿ ಅನುಷಾ ತನ್ನ ಸಹೋದರಿಯ ಜೀವ ಉಳಿಸಲು ತನ್ನ ಸ್ವಂತ ಲಿವರ್ ದಾನ ಮಾಡುವ ಧೈರ್ಯದ ನಿರ್ಧಾರವನ್ನು ತೆಗೆದುಕೊಂಡರು. ಕಸಿ ಪ್ರಕ್ರಿಯೆಗಾಗಿ ಇಬ್ಬರೂ ಸಹೋದರಿಯರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ, ಯಕೃತ್ತಿನ ಕಸಿ ಸಮಯದಲ್ಲಿ ಐಶ್ವರ್ಯಾ ಹೃದಯಾಘಾತಕ್ಕೆ ಒಳಗಾಗಿ ಪ್ರಾಣಬಿಟ್ಟಿದ್ದಾರೆ. ಲಿವರ್ ದಾನ ಪ್ರಕ್ರಿಯೆಗೆ ಒಳಗಾದ ಅನುಷಾ ಪ್ರಸ್ತುತ ಬೆಂಗಳೂರಿನ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಐಶ್ವರ್ಯಾ ಇಂಜಿನಿಯರಿಂಗ್ ಪದವೀಧರೆ ಅವರ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಖರ್ಚಾಗಿತ್ತು. ವೈದ್ಯಕೀಯ ವೆಚ್ಚವನ್ನು ಭರಿಸಲು ಸಹಾಯ ಮಾಡುವಂತೆ ಕುಟುಂಬಸ್ಥರು ಸಾಮಾಜಿಕ ಮಾಧ್ಯಮದ ಮೂಲಕ ಸಹಾಯವನ್ನು ಕೋರಿದ್ದರು.