ನವದೆಹಲಿ: ಆಧಾರ್ ಕಸ್ಟೋಡಿಯನ್ ಸಂಸ್ಥೆ ಯುಐಡಿಎಐ ಎರಡು ತಿಂಗಳ ಬಳಿಕ ಹಂತ ಹಂತವಾಗಿ ಶಾಲೆಗಳಲ್ಲಿ ಮಕ್ಕಳ ಬಯೋಮೆಟ್ರಿಕ್ ನವೀಕರಣಗಳನ್ನು ಪ್ರಾರಂಭಿಸುವ ಯೋಜನೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಸಿಇಒ ಭುವನೇಶ್ ಕುಮಾರ್ ಪಿಟಿಐ ನೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಐದು ವರ್ಷ ತುಂಬಿದ ನಂತರ ಕಡ್ಡಾಯವಾಗಿರುವ ಆಧಾರ್‌ಗಾಗಿ 7 ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಬಯೋಮೆಟ್ರಿಕ್‌ಗಳನ್ನು ನವೀಕರಿಸಿಲ್ಲ ಎಂದು ತಿಳಿಸಿದರು.
“ಪೋಷಕರ ಒಪ್ಪಿಗೆಯೊಂದಿಗೆ ಶಾಲೆಗಳ ಮೂಲಕ ಮಕ್ಕಳ ಬಯೋಮೆಟ್ರಿಕ್ಸ್ ಅನ್ನು ನವೀಕರಿಸಲು ಯುಐಡಿಎಐ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದ್ದು, ಅದು 45-60 ದಿನಗಳಲ್ಲಿ ಸಿದ್ಧವಾಗಲಿದೆ’ ಎಂದು ಕುಮಾರ್ ತಿಳಿಸಿದರು.
ಮಕ್ಕಳ ಬಯೋಮೆಟ್ರಿಕ್ ಡೇಟಾದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಕಡ್ಡಾಯ ಬಯೋಮೆಟ್ರಿಕ್ ನವೀಕರಣ (MBU) ವನ್ನು ಸಕಾಲಿಕವಾಗಿ ಪೂರ್ಣಗೊಳಿಸುವುದು ಅತ್ಯಗತ್ಯವಾಗಿದೆ. 7 ವರ್ಷ ವಯಸ್ಸಿನ ನಂತರವೂ MBU ಅನ್ನು ಪೂರ್ಣಗೊಳಿಸದಿದ್ದರೆ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಆಧಾರ್ ನಿಷ್ಕ್ರಿಯಗೊಳ್ಳಲಿದೆ.
MBU ಐದರಿಂದ ಏಳು ವರ್ಷದೊಳಗಿನ ಮಕ್ಕಳಿಗೆ ಮಾಡಲಾಗುತ್ತದೆ, ಇದು ಉಚಿತವಾಗಿದೆ ಆದರೆ ಏಳು ವರ್ಷದ ನಂತರ, ನವೀಕರಣಕ್ಕೆ 100ರೂ.ಗಳ ನಿಗದಿತ ಶುಲ್ಕವಿದೆ.
“ಮಕ್ಕಳಿಗೆ 15 ವರ್ಷ ತುಂಬಿದ ನಂತರ ಎರಡನೇ ಎಂಬಿಯುಗಾಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ನಡೆಸುವ ಅದೇ ಪ್ರಕ್ರಿಯೆಯನ್ನು ವಿಸ್ತರಿಸಲೂ ನಾವು ಯೋಜಿಸುತ್ತಿದ್ದೇವೆ” ಎಂದು ಕುಮಾರ್ ಹೇಳಿದ್ದಾರೆ.