
ಹೈದರಾಬಾದ್ನ ಅನಾಥಾಶ್ರಮವೊಂದರಲ್ಲಿ ದಿಕ್ಕು, ದೆಸೆಯಿಲ್ಲದವರಂತೆ ವಾಸಿಸುತ್ತಿದ್ದ ಇಬ್ಬರು ಮಕ್ಕಳು 10 ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ್ದಾರೆ. ಇಬ್ಬರೂ ಮಕ್ಕಳು ಕೇವಲ 5 ವರ್ಷ ವಯಸ್ಸಿನಲ್ಲೇ ಪೋಷಕರಿಂದ ಬೇರ್ಪಟ್ಟರು. ಅಂದಿನಿಂದ ಇಬ್ಬರೂ ಅನಾಥಾಶ್ರಮದಲ್ಲಿ ಜೀವನ ಸಾಗಿಸುತ್ತಿದ್ದರು. ಇಲ್ಲಿ ವಾಸವಿದ್ದ ಸಂದರ್ಭದಲ್ಲಿ ಅನಾಥಾಶ್ರಮದ ಆಡಳಿತ ಮಂಡಳಿ ಅವರ ಆಧಾರ್ ನೋಂದಣಿ ಪ್ರಕ್ರಿಯೆ ಆರಂಭಿಸಿದಾಗ ಅವರಿಬ್ಬರೂ ನಿಜವಾದ ಸಹೋದರರು ಮಾತ್ರವಲ್ಲದೆ ತಂದೆ-ತಾಯಿ ಕೂಡ ಇದ್ದಾರೆ ಎಂಬುದು ತಿಳಿದುಬಂದಿದೆ.

ಅನಾಥಾಶ್ರಮದ ಆಡಳಿತ ಮಂಡಳಿ ಪ್ರಕಾರ, ತೆಲಂಗಾಣದ ಪಲನಾಡು ಕೊಟ್ಟಪ್ಪಕೊಂಡದಲ್ಲಿ ವಾಸಿಸುತ್ತಿರುವ ನಾಗೇಂದ್ರ ಮತ್ತು ಶ್ರೀನು ದಂಪತಿಗೆ ರಾಜು ಮತ್ತು ಇಮ್ಯಾನುಯೆಲ್ ಎಂಬ ಇಬ್ಬರು ಮಕ್ಕಳಿದ್ದಾರೆ ಎಂಬುದು ತಿಳಿದುಬಂದಿತ್ತು.
ಹತ್ತು ವರ್ಷಗಳ ಹಿಂದೆ ತಾಯಿ ಹತ್ತಿರದ ಅಂಗಡಿಯಿಂದ ಏನನ್ನೋ ಖರೀದಿಸಲೆಂದು ಹಣಕೊಟ್ಟು ಕಳುಹಿಸಿದ್ದರು. ಆದರೆ ಇಬ್ಬರು ಮಕ್ಕಳು ದಾರಿ ತಪ್ಪಿದ್ದರು. ಆಗ ಯಾರೋ ಅವರು ಪರಿತ್ಯಕ್ತರಾಗಿ ಅಲೆದಾಡುವುದನ್ನು ನೋಡಿ ಅನಾಥಾಶ್ರಮಕ್ಕೆ ಕಳುಹಿಸಿದರು.




