ಬೆಳ್ತಂಗಡಿ: ಅ.15ರಂದು ಕಾರ್ಕಳದ ಕುಕ್ಕಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದ ಸಾರ್ವಜನಿಕ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾಜಿ ಶಾಸಕರಾದ ವಸಂತ ಬಂಗೇರರವರನ್ನು ಅವಾಚ್ಯವಾಗಿ ನಿಂದಿಸಿ ಜೀವ ಬೆದಲಿಕೆ ಒಡ್ಡಿ ಮತ್ತು ಉಜಿರೆ ನಿವಾಸಿಗಳನ್ನು ಪಾಪಿಗಳು ಎಂದು ನಿಂದಿಸಿರುವ ಪವರ್ ಟಿ.ವಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್ ನೇತೃತ್ವದಲ್ಲಿ ಕೊಳ್ಳೂರಿನ ಮಾವಿನಕಟ್ಟೆ ನಿವಾಸಿ ಪ್ರವೀಣ್ ಗೌಡ ದೂರು ನೀಡಿದ್ದಾರೆ.
ಕಳೆದ ಅ.15ರಂದು ಕಾರ್ಕಳದ ಕುಕ್ಕಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ಅಪರಾಹ್ನ ನಡೆದ ಸಾರ್ವಜನಿಕ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡುವ ಸಂಧರ್ಭದಲ್ಲಿ ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ.ವಸಂತ ಬಂಗೇರರನ್ನು ಉಲ್ಲೇಖಿಸಿ ಒಬ್ಬ ಮಾಜಿ ಶಾಸಕ ಅವಾಚ್ಯವಾಗಿ ನಿಂದಿಸಿ, ಆತ ಎಲ್ಲಿಯಾದರೂ ನನ್ನ ಎದುರುಗಡೆ ಬಂದಿದ್ದರೆ ನಾನು ಬೇರೆ ಸೇವೆ ಮಾಡುತ್ತಿದ್ದೆ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಅಲ್ಲದೆ ಬೆಳ್ತಂಗಡಿಯಲ್ಲಿ 5 ಬಾರಿ ಶಾಸಕರಾಗಿ ಜನಾನುರಾಗಿಯಾಗಿರುವ ಬಡವರ ಬಂಧು ವಸಂತ ಬಂಗೇರರ ಬಗ್ಗೆ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿರುತ್ತಾರೆ, ನಾನು ಕಾರ್ಕಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದು ಈ ಮಾತುಗಳನ್ನು ಕೇಳಿ ದುಃಖ ಮತ್ತು ಅವಮಾನಿತನಾಗಿ ಹಿಂದಿರುಗಿರುತ್ತೇನೆ. ಅಲ್ಲದೆ ಆತ ತನ್ನ ಭಾಷಣದುದ್ದಕ್ಕೂಸಮಾಜದಲ್ಲಿ ಧರ್ಮದೊಳಗಡೆ ಪರಸ್ಪರ ಕಚ್ಚಾಡುವಂತೆ ಮಾತುಗಳನ್ನಾಡಿ, ಉಜಿರೆ ಮತ್ತು ಬೆಳ್ತಂಗಡಿಯ ಜನರು ಪಾಪಿಗಳು ಎಂದು ಹೇಳಿ ನಮ್ಮನ್ನು ನಿಂದಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರ ನಡೆಸಿರುತ್ತಾರೆ. ಈ ದ್ವೇಷ ಪೂರಿತ ಭಾಷಣವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಿಂದಾಗಿ ನನಗೆ ಮತ್ತು ವಸಂತ ಬಂಗೇರರ ಅಭಿಮಾನಿಗಳಿಗೆ ತೀವ್ರ ಅಘಾತವಾಗಿರುತ್ತದೆ.
ಬೆಳ್ತಂಗಡಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರರನ್ನು ಈ ರೀತಿಯಾಗಿ ನಿಂದಿಸಿ, ಅವಮಾನಿಸಿ ಅವರಿಗೆ ಜೀವ ಬೆದರಿಕೆ ಒಡ್ಡಿರುವುದು. ಅಕ್ಷಮ್ಯ ಅಪರಾಧ. ಇದರಿಂದ ಅವರ ಅಭಿಮಾನಿಗಳು ನೊಂದಿದ್ದಾರೆ. ಅದುದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ರಾಕೇಶ್ ಶೆಟ್ಟಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿ ಪಟ್ಟಣ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಪ್ರಮುಖರಾದ ಈಶ್ವರ ಭಟ್, ಶೇಖರ ಕುಕ್ಕೇಡಿ, ಚಿದಾನಂದ ಎಲ್ಲಡ್ಕ ಬಿ.ಎಂ ಭಟ್, ಪ್ರಶಾಂತ್ ವೇಗಸ್, ಜಯ್ ವಿಕ್ರಮ್ ಕಲ್ಲಾಪು, ಧರಣೇಂದ್ರ ಕುಮಾರ್ ನಮಿತಾ ಪೂಜಾರಿ, ಬೊಮ್ಮಣ್ಣ ಗೌಡ ಪುದುವೆಟ್ಟು, ದೇವಿಪ್ರಸಾದ್ ಅರುವ, ಅಬ್ದುಲ್ ಕರೀಂ ಗೇರುಕಟ್ಟೆ ಗ್ರೇಷಿಯನ್ ವೇಗಸ್, ಪದ್ಮನಾಭ ಸಾಲಿಯಾನ್ ಮಾಲಾಡಿ, ವಿನ್ಸೆಂಟ್ ಮಡಂತ್ಯಾರು, ಬೇಬಿ ಸುವರ್ಣ, ಶೇಖರ ಲಾಯಿಲ, ವಕೀಲ ಮನೋಹರ್ ಕುಮಾರ್ ಇಳಂತಿಲ, ಪ್ರಮುಖರಾದ ಇಸ್ಮಾಯಿಲ್ ಕೆ.ಪೆರಿಂಜೆ, ಉಷಾ ಶರತ್, ಅಯೂಬ್, ಬಿ.ಕೆ.ವಸಂತ, ಸೌಮ್ಯ ಉಜಿರೆ, ಸದಾನಂದ ಶೆಟ್ಟಿ ಮರೋಡಿ, ಅಶ್ರಫ್ ನೆರಿಯ, ರಫೀಕ್ ಬೆಳ್ತಂಗಡಿ, ಶ್ರೀಮತಿ ಹಾಜಿರಾ, ಸಂದೀಪ್ ನೀರ ಸೇರಿದಂತೆ ಅಪಾರ ವಸಂತ ಬಂಗೇರ ಅಭಿಮಾನಿಗಳು ಉಪಸ್ಥಿತರಿದ್ದರು.