ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಕಮಲ್ ಹಾಸನ್ ಸುದೀರ್ಘ ಪತ್ರ

Share with

ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವಿಚಾರ ಇನ್ನು ತಣ್ಣಗಾಗಿಲ್ಲ. ನಾನು ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಮೊಂಡುವಾದ ಮುಂದುವರೆಸಿದ್ದಾರೆ. ಕನ್ನಡ ಪರ ಸಂಘಟನೆಗಳು ಕ್ಷಮೆಗೆ ಆಗ್ರಹಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಕಮಲ್ ಕ್ಷಮೆ ಕೇಳಬೇಕು ಎಂದು ಹೇಳಿದೆ.

ಇತ್ತೀಚೆಗೆ ಕಮಲ್ ಹಾಸನ್ ಅವರಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು ಪತ್ರ ಬರೆದಿದ್ದರು. ನಿಮ್ಮ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ. ನೀವು ಕ್ಷಮೆ ಕೇಳಬೇಕು ಎಂದು ಕೇಳಿದ್ದರು. ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅಡ್ಡಿ ಆಗುವ ಬಗ್ಗೆ ತಿಳಿಸಿದ್ದರು. ಇದೀಗ ಅದಕ್ಕೆ ಕಮಲ್ ಪ್ರತಿಕ್ರಿಯಿಸಿ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

30/05/2025 ರಂದು ಬರೆದ ನಿಮ್ಮ ಪತ್ರ ತಲುಪಿದೆ. ಕರ್ನಾಟಕದ ಜನರ ಮೇಲಿನ ಆಳವಾದ ಗೌರವದಿಂದ, ನಾನು ಪ್ರಾಮಾಣಿಕವಾಗಿ ಈ ವಿಚಾರವನ್ನು ಹೇಳುತ್ತಿದ್ದೇನೆ ಎಂದು ಕಮಲ್ ಹಾಸನ್ ಪತ್ರ ಆರಂಭಿಸಿದ್ದಾರೆ. “ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್ ಅವರ ಕುಟುಂಬದ ಬಗ್ಗೆ, ವಿಶೇಷವಾಗಿ ಶಿವ ರಾಜ್‌ಕುಮಾರ್ ಅವರ ಬಗ್ಗೆ ನಿಜವಾದ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅದನ್ನು ಬೇರೆ ರೀತಿ ಭಾವಿಸಿರುವುದು ನನಗೆ ನೋವುಂಟು ಮಾಡಿದೆ. ನಾವೆಲ್ಲರೂ ಒಂದೇ ಮತ್ತು ಒಂದೇ ಕುಟುಂಬದವರು ಎನ್ನುವುದು ನನ್ನ ಮಾತಾಗಿತ್ತು. ಕನ್ನಡವನ್ನು ಯಾವುದೇ ರೀತಿಯಲ್ಲಿ ಕಮ್ಮಿ ಎನ್ನುವುದು ನನ್ನ ಉದ್ದೇಶವಲ್ಲ” ಎಂದು ಕಮಲ್ ಹೇಳಿದ್ದಾರೆ.

ಪತ್ರ ಮುಂದುವರೆಸಿರುವ ತಮಿಳು ನಟ “ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ. ತಮಿಳಿನಂತೆಯೇ, ಕನ್ನಡವು ನಾನು ಬಹಳ ಹಿಂದಿನಿಂದಲೂ ಮೆಚ್ಚುವ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಹೊಂದಿದೆ. ನನ್ನ ವೃತ್ತಿಜೀವನದುದ್ದಕ್ಕೂ, ಕನ್ನಡ ಮಾತನಾಡುವ ಸಮುದಾಯವು ನನಗೆ ನೀಡಿದ ಗೌರವ ಮತ್ತು ಪ್ರೀತಿಯನ್ನು ನಾನು ಮರೆಯುವುದಿಲ್ಲ. ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು ಮತ್ತು ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಗೆ ನನಗೆ ಅಪಾರ ಗೌರವವಿದೆ ಎಂದು ನಾನು ಇದನ್ನು ಸ್ಪಷ್ಟ ಆತ್ಮಸಾಕ್ಷಿ ಮತ್ತು ದೃಢನಿಶ್ಚಯದಿಂದ ಹೇಳುತ್ತೇನೆ” ಎಂದು ಕಮಲ್ ಬರೆದಿದ್ದಾರೆ.

ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯವು ಶಾಶ್ವತ. ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳ ಸಮಾನ ಘನತೆಯ ಪರವಾಗಿ ನಿಲ್ಲುತ್ತೇನೆ ಮತ್ತು ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ, ಏಕೆಂದರೆ ಅಂತಹ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಯನ್ನು ಹಾಳು ಮಾಡುತ್ತದೆ. ನನ್ನ ಹಿರಿಯರು ನನಗೆ ಕಲಿಸಿದ ಈ ಪ್ರೀತಿ ಮತ್ತು ಬಾಂಧವ್ಯವನ್ನೇ ನಾನು ಹಂಚಿಕೊಳ್ಳಲು ಬಯಸಿದ್ದೆ. ಈ ಪ್ರೀತಿ ಮತ್ತು ಬಾಂಧವ್ಯದಿಂದಲೇ ಶಿವಣ್ಣ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿದ್ದರು. ಇದರಿಂದಾಗಿ ಶಿವಣ್ಣ ಇಷ್ಟೊಂದು ಮುಜುಗರ ಅನುಭವಿಸಬೇಕಾಯಿತು ಎಂದು ನನಗೆ ನಿಜವಾಗಿಯೂ ವಿಷಾದವಿದೆ” ಎಂದಿದ್ದಾರೆ.

ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಯಾವುದೇ ಅವಕಾಶ ನೀಡಿಲ್ಲ ಮತ್ತು ಎಂದಿಗೂ ಬಯಸುವುದಿಲ್ಲ ಎಂದು ಕಮಲ್ ಹಾಸನ್ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ತಮ್ಮ ಹೇಳಿಕೆ ವಾಪಸ್ ಪಡೆಯುವುದು ಅಥವಾ ಕ್ಷಮೆ ಕೇಳುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಈಗಾಗಲೇ ಕಮಲ್ ಹೈಕೋರ್ಟ್ ಮೆಟ್ಟೆಲೇರಿದ್ದಾರೆ. ಅಲ್ಲಿ ಕೂಡ ಹಿನ್ನಡೆಯಾಗಿದೆ.


Share with

Leave a Reply

Your email address will not be published. Required fields are marked *