ಇಟಲಿ, ಜಪಾನ್ ಬಳಿಕ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ

Share with

ಬೆಂಗಳೂರು, ಫೆಬ್ರವರಿ 6: ಬೆಂಗಳೂರಿನಲ್ಲಿ (Bangalore) ವಿದೇಶಿ ರಾಯಭಾರಿ ಕಚೇರಿಗಳಿಗೆ ಮತ್ತೆ ಬಾಂಬ್ ಬೆದರಿಕೆ (Bomb Threat) ಸಂದೇಶಗಳು ಬರುತ್ತಿದ್ದು ಆತಂಕ ಮೂಡಿಸಿದೆ. ಇಟಲಿ ಮತ್ತು ಜಪಾನ್ ಕಾನ್ಸುಲೇಟ್ ಬಳಿಕ ಇದೀಗ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದು ಬೆಳಕಿಗೆ ಬಂದಿದೆ. ಆರ್ಟಿ ನಗರದ ಗಂಗಾನಗರದಲ್ಲಿರುವ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೆ ಜನವರಿ 29ರಂದು ಕಿಡಿಗೇಡಿಗಳು ಇ-ಮೇಲ್ ಕಳುಹಿಸಿ ‘‘5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ’’ ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ರಾಯಭಾರಿ ಕಚೇರಿ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಹಿಂದೆ ಹಲಸೂರಿನಲ್ಲಿರುವ ಇಟಾಲಿಯನ್ ಕಾನ್ಸುಲೇಟ್ ಕಚೇರಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. gaina_ramesh@outlook.com ವಿಳಾಸದಿಂದ bangalore.visa@esteri.it ಗೆ ಸಂದೇಶ ಕಳುಹಿಸಿ ‘5 RDX ಬಾಂಬ್ ಸ್ಫೋಟ ಮಾಡುತ್ತೇವೆ’ ಎಂದು ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದರ ಬೆನ್ನಲ್ಲೇ ಕಬ್ಬನ್ ರಸ್ತೆಯಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ಕಚೇರಿಗೂ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿತ್ತು. ‘Please be careful, someone will kill you’ ಎಂದು ಕರೆ ಬಂದಿದ್ದಾಗಿ ತಿಳಿದುಬಂದಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ಯ ಇಟಲಿ, ಜಪಾನ್ ಹಾಗೂ ನೆದರ್‌ಲ್ಯಾಂಡ್ ಕಚೇರಿಗಳಿಗೆ ಬಂದಿರುವ ಬೆದರಿಕೆ ಸಂದೇಶಗಳ ಮೂಲ ಪತ್ತೆಗೆ ಪೊಲೀಸರು ಇ-ಮೇಲ್ ಐಡಿ ಹಾಗೂ ಕರೆಗಳ ಜಾಡು ಬೆನ್ನತ್ತಿದ್ದು, ರಾಯಭಾರ ಕಚೇರಿಗಳಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ


Share with

Leave a Reply

Your email address will not be published. Required fields are marked *