ಬೆಂಗಳೂರು : ಬೆಂಗಳೂರಿನಿಂದ ತುಮಕೂರಿಗೆ ಮಾರ್ಗ ವಿಸ್ತರಣೆ ಮಾಡಲು ಈಗಾಗಲೇ ಬಿಎಂಆರ್ಸಿಎಲ್ (BMRCL) ಸಿದ್ಧತೆ ನಡೆಸಿದೆ. ಇದರ ಜೊತೆಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ರಾಮನಗರಕ್ಕೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ನಡುವೆ ರಾಮನಗರ ಜಿಲ್ಲೆಯ ಬಿಡದಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಕುರಿತು ಬಿಎಂಆರ್‌ಸಿಎಲ್ ಮೊದಲ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ವರದಿ ತಯಾರು ಮಾಡಲು ಟೆಂಡರ್ ಸಹ ಕರೆದಿದೆ.
ಬಿಎಂಆರ್‌ಸಿಎಲ್ ಜುಲೈ 9ರಂದು 1.59 ಕೋಟಿ ರೂ.ಗಳ ಟೆಂಡರ್ ಕರೆದಿತ್ತು. ಒಟ್ಟು ಮೂರು ಮಾರ್ಗದಲ್ಲಿ ನಮ್ಮ ಮೆಟ್ರೋ ಯೋಜನೆಯನ್ನು ವಿಸ್ತರಣೆ ಮಾಡಲು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರು ಮಾಡಲು ಹೈದರಾಬಾದ್ ಮೂಲದ ಕಂಪನಿಗೆ ಟೆಂಡರ್ ನೀಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಬಿಎಂಆರ್‌ಸಿಎಲ್ 50 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮತ್ತು 68 ಕಿ. ಮೀ. ನೂತನ ಮಾರ್ಗ ನಿರ್ಮಾಣದ ಕುರಿತು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರು ಮಾಡಲು ಟೆಂಡರ್ ಆಹ್ವಾನಿಸಿತ್ತು. ಈಗ ಟೆಂಡರ್ ಅಂತಿಮಗೊಳಿಸಲಾಗಿದೆ. ಬಿಎಂಆರ್‌ಸಿಎಲ್ ವರದಿ ಪ್ರಕಾರ ವಿಸ್ತರಿತ ಮಾರ್ಗದಲ್ಲಿ ಚಲ್ಲಘಟ್ಟ-ಬಿಡದಿ 15 ಕಿ. ಮೀ. ಸಿಲ್ಕ್ ಇನ್ಸಿಟಿಟ್ಯೂಟ್-ಹಾರೋಹಳ್ಳಿ 24 ಕಿ. ಮೀ. ಬೊಮ್ಮಸಂದ್ರ-ಅತ್ತಿಬೆಲೆ 11 ಕಿ. ಮೀ ಮಾರ್ಗವಿದೆ.
ಕಾಳೇನ ಅಗ್ರಹಾರ-ಕಾಡುಗೋಡಿ ಟ್ರೀ ಪಾರ್ಕ್ ವಯಾ ಜಿಗಣಿ, ಅನೇಕಲ್, ಅತ್ತಿಬೆಲೆ, ಸರ್ಜಾಪುರ ಮತ್ತು ವರ್ತೂರು (52.41 ಕಿ. ಮೀ.) ಹೊಸ ಮಾರ್ಗ ಕೂಡ ಸೇರಿದೆ. ಯಾವುದೇ ಯೋಜನೆಯ ಮೇಲೆ ಹೂಡಿಕೆ ಮಾಡುವ ಮೊದಲು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರು ಮಾಡಲಾಗುತ್ತದೆ. ಯೋಜನೆಯ ಪ್ರಾಥಮಿಕ ಅಧ್ಯಯನ, ತಾಂತ್ರಿಕ, ಸಾಮಾಜಿಕ, ಆರ್ಥಿಕ ಮುಂತಾದ ಅಂಶಗಳು ಈ ವರದಿಯಲ್ಲಿ ಸೇರಿರುತ್ತವೆ. ಈ ವರದಿ ಅಂತಿಮಗೊಂಡರೆ ಯೋಜನೆಯ ಡಿಪಿಆರ್ ತಯಾರು ಮಾಡಲಾಗುತ್ತದೆ ಅದರಂತೆ ಸದ್ಯ ಈಗ ಬಿಡದಿಗೆ ಈ ಅಧ್ಯಯನಕ್ಕಾಗಿ ಬಿಎಂಆರ್ಸಿಎಲ್ ಟೆಂಡರ್ ಪ್ರಕ್ರಿಯೆ ನಡೆಸಿದೆ.
ಕರ್ನಾಟಕ ಸರ್ಕಾರ ಕಾರ್ಯಸಾಧ್ಯತೆಯ ಅಧ್ಯಯನ ವರದಿಯ ಅನ್ವಯ ಬಿಡದಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ವರದಿಗೆ ಒಪ್ಪಿಗೆ ಸಿಕ್ಕಿದರೆ ಬಿಎಂಆರ್‌ಸಿಎಲ್ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಲು ಪ್ರತ್ಯೇಕ ಟೆಂಡರ್ ಕರೆಯಲಿದೆ. ಇನ್ನೂ ಬೆಂಗಳೂರು ನಗರದ ಹೊರವಲಯಕ್ಕೂ ಕೈಗಾರಿಕೆ, ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಬಿಡದಿಯನ್ನು ಕೈಗಾರಿಕಾ ಹಬ್ ಆಗಿ ಪರಿವರ್ತನೆ ಮಾಡಿ ಬೆಂಗಳೂರು ನಗರದ ಮೇಲಿರುವ ಒತ್ತಡ ಕಡಿಮೆ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಬಿಎಂಆರ್‌ಸಿಎಲ್ ಸಹ ಹೊರ ವಲಯಕ್ಕೆ ಮೆಟ್ರೋ ಸಂಪರ್ಕ ವಿಸ್ತರಣೆ ಮಾಡುವ ಚಿಂತನೆ ನಡೆಸುತ್ತಿದೆ.