ತಿರುವನಂತಪುರ: ದೂರದರ್ಶನದ ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಕೃಷಿ ತಜ್ಞರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ.
ಕೇರಳ ಕೃಷಿ ವಿಶ್ವವಿದ್ಯಾಲಯದಲ್ಲಿ ಯೋಜನಾ ನಿರ್ದೇಶಕರಾಗಿದ್ದ ಡಾ.ಅನಿ ದಾಸ್ (59) ಮೃತಪಟ್ಟವರು.
ದಾಸ್ ಅವರು ಈ ಹಿಂದೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಹಲವು ಸಲ ಭಾಗವಹಿಸಿದ್ದರು. ಜ.12ರಂದು ಸಂಜೆ ದಾಸ್ ಅವರು ಇಲ್ಲಿನ ದೂರದರ್ಶನ ಸ್ಟುಡಿಯೊಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತಿಥಿಯಾಗಿ ಆಗಮಿಸಿದ್ದರು.
ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕೃಷಿ ಬಗ್ಗೆ ಮಾತನಾಡುತ್ತಿದ್ದ ಅವರು ದಿಢೀರನೇ ಕುಸಿದು ಬಿದ್ದರು. ಕೂಡಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.